Tuesday, 20 October 2020
ಡಾ.ಎಚ್.ಎನ್.ರವರ ಸರಳತೆ ಮತ್ತು ಸಾಮಾಜಿಕ ಚಿಂತನೆ
ದೇಶದ ಓರ್ವ ಪ್ರಮುಖ ವಿಚಾರವಂತರು. ಶಿಕ್ಷಣತಜ್ಞರು, ಮೌಲ್ಯಗಳ ಪ್ರತಿಪಾದಕರು, ಸತ್ಯ ನೀತಿ ಬೋಧಕರು, ಶೋಧಕರು, ಶಿಸ್ತಿನ ಸಿಪಾಯಿ, ಗಾಂಧಿವಾದಿ ಎನಿಸಿದ ಡಾ.ಎಚ್.ನರಸಿಂಹಯ್ಯನವರು ಒಬ್ಬ ವ್ಯಕ್ತಿಯಾಗಿರಲಿಲ್ಲ, ಬಹು ದೊಡ್ಡ ಶಕ್ತಿಯಾಗಿದ್ದರು. ಅವರು ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನುವಷ್ಟು ಕ್ರಿಯಾಶೀಲರಾಗಿದ್ದರು. ಬಹುಮುಖ ಪ್ರತಿಭೆಯ ಈ ಸರಳ ಮೂರ್ತಿ ಕೋಲಾರ ಎಂಬಲ್ಲಿ ಬಡಕುಟುಂಬವೊಂದರಲ್ಲಿ ಜೂನ್ 6, 1920ರಂದು ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ. ಪ್ರಾಥಮಿಕ ಶಿಕ್ಷಣವನ್ನು ಹೊಸೂರಿನಲ್ಲಿ ಮುಗಿಸಿ, ತಮ್ಮ ಪ್ರತಿಭೆಯಿಂದ ಗುರುಗಳ ಪ್ರೀತಿ ಗೆದ್ದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆಯುವಲ್ಲಿ ಯಶಸ್ವಿಯಾದರು. ಇದೇ ಸಂಸ್ಥೆಯ ಕಾಲೇಜಿನಲ್ಲಿ ಭೌತವಿಜ್ಞಾನ ಬಿ.ಎಸ್ಸಿ ಪದವಿ ಗಳಿಸಿ, 1957ರಲ್ಲಿ ಅಮೆರಿಕೆಯ ಓಹಯೋ ರಾಜ್ಯ ವಿಶ್ವವಿದ್ಯಾಲಯದ ಫುಲ್ಬ್ರೈಟ್ ಗ್ರಾಂಟ್ ನೆರವಿನಿಂದ ಬೈಜಿಕ ಭೌತ ವಿಜ್ಞಾನದಲ್ಲಿ ಪಿಎಚ್ಡಿ ಪದವಿ ಪಡೆದು, ಸ್ವದೇಶಕ್ಕೆ ವಾಪಸಾದರು.
ಬಾಲ್ಯದಲ್ಲಿಯೇ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೊಳಗಾಗಿದ್ದ ಎಚ್ಎನ್ ಜೂನ್ 11, 1936ರಂದು ಗಾಂಧೀಜಿಯವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಅವರ ಶಿಷ್ಯತ್ವವನ್ನು ಸ್ವೀಕರಿಸಿ ಗಾಂಧಿವಾದಿಯಾದರು. ತಮ್ಮ 22ನೇ ವಯಸ್ಸಿನಲ್ಲಿ ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧನಕ್ಕೊಳಗಾದರು. ಬೆಂಗಳೂರಿನ ಅಲಸೂರು ಗೇಟ್ ಪೋಲೀಸ್ ಠಾಣೆ ಇವರ ಮೊದಲ ಸೆರೆಮನೆ. ಮತ್ತೆ ಹೋರಾಟದಲ್ಲಿ ಆನೆಕಲ್ ಅತ್ತಿಬೆಲೆ ಸಮೀಪದಲ್ಲಿ ಬಂಧನ. ಬಳಿಕ ಸೆಂಟ್ರಲ್ ಜೈಲು, ಮೈಸೂರು ಜೈಲು ಸೇರಿದಂತೆ ದೇಶದ ದೊಡ್ಡ ಜೈಲೆನಿಸಿದ ಪೂನಾದಲ್ಲಿರುವ ಯರವಾಡಾ ಜೈಲಿನಲ್ಲೂ ಸೆರೆಮನೆ ಶಿಕ್ಷೆ ಅನುಭವಿಸಿದರು.
ದೇಶದಲ್ಲಿ ನುಡಿದಂತೆ ನಡೆದವರು ತೀರಾ ಬೆರಳಣಿಕೆಯಷ್ಟು. ಜೀವನ ಪರ್ಯಂತ ತಾವು ನಂಬಿದ ಹಾಗೂ ಇತರರಿಗೆ ಉಪದೇಶಿಸಿದ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಬಾಳುವವರೇ ವಿಶಿಷ್ಟರು. ಅಂತವರ ಸಾಲಿನಲ್ಲಿ ಎಚ್ಎನ್ ಕೂಡ ಒಬ್ಬರು.
ಎಚ್ಎನ್ ವೈಜ್ಞಾನಿಕ ಮನೋಭಾವ ಪ್ರವರ್ತಕರು. ಮೂಢನಂಬಿಕೆಗಳ ವಿರುದ್ಧ ಹೋರಾಡಿದವರು. ಪ್ರಶ್ನಿಸದೇ ಯಾವುದನ್ನೂ ಒಪ್ಪುತ್ತಿರಲಿಲ್ಲ. ಸೂರ್ಯಗ್ರಹಣವಾದಾಗ ಸೂರ್ಯನನ್ನು ರಾಹುವೋ, ಕೇತುವೋ ನುಂಗುವುದು ಎಂಬ ನಂಬಿಕೆ. ಈ ಸಮಯದಲ್ಲಿ ಆಹಾರ ಸೇವನೆ ನಿಷಿದ್ಧ. ಹೀಗೆ ಪುರೋಹಿತಶಾಹಿ ನಿರ್ಮಿಸಿದ ಮೌಢ್ಯದ ಕೋಟೆ. ಇವೆಲ್ಲ ಸ್ವಲಾಭಕ್ಕಾಗಿಯೇ. ವಿಜ್ಞಾನ ಹೇಳುವಂತೆ ಗ್ರಹಣ ಎನ್ನುವುದು ನೈಸರ್ಗಿಕ ಕ್ರಿಯೆ. ಇದರಲ್ಲಿ ಯಾವ ರಾಕ್ಷಸರ ಕೈವಾಡವೂ ಇಲ್ಲ ಎನ್ನುವುದು ಸತ್ಯ. ಈ ಮೂಢನಂಬಿಕೆಯ ವಿರುದ್ಧ ಎಚ್ಎನ್ರವರು ಕೇವಲ ಉಪನ್ಯಾಸ ನೀಡಲಿಲ್ಲ. ಸೂರ್ಯ ಗ್ರಹಣವಾಗುವಾಗ ಹೊರಗೆ ಕುಳಿತು ಗ್ರಹಣಗ್ರಸ್ತ ಸೂರ್ಯನ ಎದುರಿಗೆ ಆಹಾರ ಸೇವಿಸಿದರು. ತಮ್ಮ ಸ್ವಗ್ರಾಮ ಹೊಸೂರಿನಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಭಾಷಣಕ್ಕಿಂತ ಈ ಚರ್ಚೆ ಮಹತ್ತರ ಪರಿಣಾಮ ಬೀರಿತು. ಎಚ್ಎನ್ರ ಜೀವನದ ಉದ್ದಕ್ಕೂ ಇಂತಹ ಪ್ರಸಂಗಗಳಿವೆ.
ಅಪ್ಪಟ ಗಾಂಧಿವಾದಿಯಾಗಿದ್ದ ಎಚ್ಎನ್ ತಾರ್ಕಿಕ ಮನೋಭಾವದವರು. 1943ರಲ್ಲಿ ಮತ್ತೆ ಚಳುವಳಿಗಿಳಿದರು. 1947ರಲ್ಲಿ ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಸಹಪಾಠಿ ಕೆ.ಶ್ರೀನಿವಾಸನ್ ಜೊತೆ ಸೇರಿ ‘ಇಂಕ್ವಿಲಾಬ್’ ಎಂಬ ಪತ್ರಿಕೆ ಹೊರಡಿಸಿದರು.
1946ರಿಂದ 1960ರ ಅವಧಿಯಲ್ಲಿ ನ್ಯಾಶನಲ್ ಕಾಲೇಜಿನ ಭೌತ ವಿಜ್ಞಾನ ಉಪನ್ಯಾಸಕರಾಗಿ, 1961ರಿಂದ 1972ರವರೆಗೆ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಶಿಕ್ಷಣ, ವಿಜ್ಞಾನ, ಗಾಂಧಿತತ್ವ, ಕ್ರೀಡೆ, ನಾಟಕ ಈ ರೀತಿ ಎಲ್ಲ ವಿಷಯಗಳಿಗೂ ಪೂರಕವಾದ ವಿಭಾಗಗಳನ್ನು ಸ್ಥಾಪಿಸಿ, ನ್ಯಾಶನಲ್ ಕಾಲೇಜನ್ನು ಸಮರ್ಥವಾಗಿ ಅಭಿವೃದ್ಧಿಪಡಿಸಿದರು. ಅವರ ಅಧಿಕಾರವಧಿಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಹಶಿಕ್ಷಣ, ಅಧ್ಯಾಪಕರ ಹಾಜರಾತಿ ಸಹಿ ಪದ್ಧತಿ. ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ವಿಶೇಷ ತರಬೇತಿ ಹೀಗೆ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು. ಇದರಿಂದ ಕಾಲೇಜಿನ ಫಲಿತಾಂಶದಲ್ಲೂ ಸುಧಾರಣೆ ಕಂಡು ಕಾಲೇಜಿಗೆ ವಿಶೇಷ ಮಾನ್ಯತೆ ಸಿಕ್ಕಿತು. ನಂತರ ಗೌರಿಬಿದನೂರು, ಬಾಗೇಪಲ್ಲಿ, ಯಲ್ದೂರು, ಮಡಿಯನೂರು, ಸುಬ್ರಮಣ್ಯಪುರ, ಜಯನಗರಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲೆಗಳನ್ನು ತೆರೆದರು.
ಜನರಲ್ಲಿ ವೈಜ್ಞಾನಿಕ ಅರಿವು ನೀಡುವ ಸಲುವಾಗಿ ಬೆಂಗಳೂರು ಸೈನ್ಸ್ ಫೋರಂ(ಬೆಂಗಳೂರು ವಿಜ್ಞಾನ ವೇದಿಕೆ) ಪ್ರಾರಂಭಿಸಿದರು. ಇಲ್ಲಿ ಪ್ರತಿ ಬುಧವಾರ ಸಂಜೆ ವಿಜ್ಞಾನ ಕಾರ್ಯಕ್ರಮಗಳು ನಡೆಯುತ್ತ ಬಂದವು. ಅಲ್ಲದೇ ಪ್ರತೀವರ್ಷ ಒಂದು ತಿಂಗಳ ಕಾಲ ಬೇರೆ ಬೇರೆ ಕ್ಷೇತ್ರದ ವಿಜ್ಞಾನಿಗಳ ಉಪನ್ಯಾಸ ಕಾರ್ಯಕ್ರಮದ ವ್ಯವಸ್ಥೆಯನ್ನು ಅವರು ಜಾರಿಗೆ ತಂದರು.
ಇವರ ಸಾಧನೆಗಳನ್ನು ಗುರುತಿಸಿದ ಸರ್ಕಾರವು 1972ರಿಂದ 1977ರವರೆಗೆ ಇವರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಿಸಿತು. ಇಲ್ಲಿ ಕೂಡ ಎಚ್ಎನ್ರವರು ವಿದ್ಯಾರ್ಥಿಗಳು ಉಪನ್ಯಾಸಕರ ಮೆಚ್ಚುಗೆಗೆ ಪಾತ್ರರಾದರು. ಇವರು ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ, ವಿಸ್ತಾರ, ಘನತೆ ಹೆಚ್ಚಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ವಿಧಾನಸೌಧದಲ್ಲಿಯೂ ಕಾರ್ಯನಿರ್ವಹಿಸಿದರು. ಅಲ್ಲಿ ಎಲ್ಲ ರಾಜಕಾರಣಿಗಳ, ಗಣ್ಯರ ಮೆಚ್ಚುಗೆಗೂ ಪಾತ್ರರಾದರು.
1980ರಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಾಥಮಿಕ ಸ್ಥಾಪಕ ಅಧ್ಯಕ್ಷರಾಗಿ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ದಿಟ್ಟ ಹೆಜ್ಜೆ ಇಟ್ಟರು. ತಮ್ಮ ಕಾರ್ಯದೊತ್ತಡದಲ್ಲಿ ಬೇರೆ ಬೇರೆ ಸಂಸ್ಥೆಗಳ ಕಾರ್ಯನಿರ್ವಹಣೆಯಿಂದ ದೂರವಾಗಿದ್ದರೂ 2004-15ರಲ್ಲಿ ಪುನಃ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಹಾಪೋಷಕರಾಗಿ ಸಂಸ್ಥೆಗೊಂದು ನೆಲೆ ಒದಗಿಸಿದರು. ಬೆಂಗಳೂರು ನಗರದ ಹೃದಯಭಾಗ ಬನಶಂಕರಿ ಎರಡನೇ ಹಂತದಲ್ಲಿ ಬಿಡಿಎ ನಿವೇಶನ ಒದಗಿಸಿ ಕರಾವಿಪದ ಇಂದಿನ ಬೃಹತ್ ಕಟ್ಟಡ ‘ವಿಜ್ಞಾನ ಭವನ’ ಕ್ಕೆ ಸಾಕ್ಷಿಯಾದರು. ಜನರಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆ, ಕಂದಾಚಾರ, ಭಾನಾಮತಿ ಇವುಗಳ ಬಗೆಗೆ ಪ್ರಶ್ನೆ ಹುಟ್ಟು ಹಾಕುವ ಪ್ರವೃತ್ತಿಯನ್ನು ಜನಸಾಮಾನ್ಯರಲ್ಲಿ ಬೆಳೆಸಲು ಎಚ್ಎನ್ ನಿರಂತರ ಶ್ರಮಿಸಿದರು. ಪವಾಡ ಮಾಡಿ ಜನರನ್ನು ಮೋಸ ಮಾಡುವವರಿಗೆ ಬಹಿರಂಗವಾಗಿಯೇ ಸವಾಲು ಹಾಕಿದರು. ಪವಾಡಗಳನ್ನು ಬಯಲು ಮಾಡಿದರು.
“ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳಬೇಡಿ” ಎಂಬುವುದು ಇವರ ತತ್ವವಾಗಿತ್ತು. ಜನರಲ್ಲಿ ಪ್ರಶ್ನಿಸುವ ಮನೋಭಾವವನ್ನು ಹುಟ್ಟು ಹಾಕಿದರು. ಪ್ರಶ್ನೆ ಮಾಡುವವ ತಾತ್ಕಾಲಿಕ ಮೂರ್ಖ. ಪ್ರಶ್ನೆ ಕೇಳದವ ಶಾಶ್ವತ ಮೂರ್ಖನಾಗುವ. ಆದ್ದರಿಂದ ಮೂರ್ಖರಾಗುವ ಆಯ್ಕೆಗಳನ್ನು ಜನರ ಎದುರು ತೆರೆದಿಟ್ಟರು. ಇದಕ್ಕೆ ಪ್ರಶ್ನೆ ಮಾಡುವುದೊಂದೇ ಪರಿಹಾರ ಎನ್ನುವುದು ಅವರ ವಾದವಾಗಿತ್ತು.
ಎಚ್ಎನ್ ಶಿಷ್ಯಗಣ ಬಹುದೊಡ್ಡದು. ಸದಾ ಜನಜಂಗುಳಿಯ ಮಧ್ಯದಲ್ಲಿ ನಗುತ್ತಾ ‘ಕುಶಲ ಕುಶಲೋಪರಿ’ ವಿಚಾರಿಸುತ್ತ, ಜನರ ಊಟೋಪಚಾರಗಳನ್ನು ಬಯಸುತ್ತಾ ತಮ್ಮ ಜೀವಮಾನವೆಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿಯೇ ಕಳೆದ ಈ ಮಹಾನುಭಾವರು ವಿದ್ಯಾರ್ಥಿಗಳನ್ನು ಸ್ವತಃ ತಮ್ಮ ಮಕ್ಕಳಂತೇ ಕಂಡವರು. ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ನ್ಯಾಶನಲ್ ಕಾಲೇಜಿನ ಚಿಕ್ಕ ಕೊಠಡಿಯಲ್ಲೇ ಕೊನೆಯವರೆಗೂ ಬದುಕು ನಡೆಸಿದರು. ಒಂದು ಟೆಲಿಫೋನು, ಒಂದು ಚಾಪೆ, ಒಂದು ಚಿಕ್ಕ ಟೇಬಲ್ಲು ಇವೇ ಇವರ ಆಸ್ತಿಗಳು. ಯಾರಾದರೂ ಅತಿಥಿಗಳು ತಂದ ಹಣ್ಣು ಹಂಪಲಗಳು ಅಲ್ಲಿ ಇರುತ್ತಿದ್ದವು. ಬಿಳಿ ಅಂಗಿ, ಪಂಚೆ, ಬಿಳಿ ಟೋಪಿ ಇವರ ಸರಳತೆ ಸಾರುತ್ತವೆ. ಜನಪ್ರೀಯತೆಯ ತುತ್ತತುದಿಗೆ ಏರಿದ್ದ ಎಚ್ಎನ್ ಸರಳತೆಯನ್ನೇ ಬಯಸಿದರು. 1968ರಲ್ಲಿ ಶೈಕ್ಷಣಿಕ ರಂಗದ ಸಾಧನೆಗಾಗಿ ರಾಜ್ಯಪ್ರಶಸ್ತಿ, 1984ರಲ್ಲಿ ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮಭೂಷಣ. ಇನ್ನೂ ಹಲವು ಪ್ರಶಸ್ತಿ, ಪುರಸ್ಕಾರ, ಮಾನ, ಸಮ್ಮಾನಗಳು ಇವರನ್ನು ಹುಡುಕಿಕೊಂಡು ಬಂದವು. ಯಾವುದಕ್ಕೂ ಹಿಗ್ಗದೇ ಕುಗ್ಗದೇ ಸಾರ್ವಜನಿಕ ಕ್ಷೇತ್ರದಲ್ಲಿ ಮೌಲ್ಯಾಧಾರಿತ ಬದುಕು ಸಾಗಿಸಿದ ಧೀಮಂತ ಎಚ್ಎನ್ ನಮಗೆಲ್ಲ ಆದರ್ಶಪ್ರಾಯರು.
Subscribe to:
Post Comments (Atom)
-
ಶತಮಾನದ ಕೊನೆಯ ಶುಕ್ರ ಸಂಕ್ರಮ. ಲೇಖನ - ಡಾ . ಲಿಂಗರಾಜ ರಾಮಾಪೂರ ಶತಮಾನದ ಅಪರೂಪದ ಶುಕ್ರಸಂಕ್ರಮ ಜೂನ್ 6 ರಂದು ಸಂಭವಿಸಲಿದೆ . ಈ ಹಿಂದೆ 2004 ...
No comments:
Post a Comment