Tuesday, 20 October 2020

ಪರಿಸರ ಕಾನೂನುಗಳು

ಪರಿಸರ ಕಾನೂನುಗಳು • ಡಾ.ಲಿಂಗರಾಜ ರಾಮಾಪೂರ, ಆಂಗ್ಲಭಾಷಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕಿರೇಸೂರ. ತಾ-ಹುಬ್ಬಳ್ಳಿ ಮೊ-9964571330 ಜೂನ್ 5, ವಿಶ್ವ ಪರಿಸರ ದಿನ. ಪರಿಸರ ಮಹತ್ವವನ್ನು ಸಾರುವ ದಿನ. ಪರಿಸರದ ಅವಿಭಾಜ್ಯ ಅಂಗವಾಗಿರುವ ಮನುಷ್ಯ ಪ್ರಕೃತಿಯನ್ನು ಸ್ಮರಿಸುವ ದಿನ. ನಿರಂತರವಾಗಿ ಪರಿಸರವನ್ನು ಶೋಷಣೆ ಮಾಡುತ್ತಾ ಬಂದಿರುವ ಮನುಷ್ಯ ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಸ್ವಾತಂತ್ರ್ಯಾನಂತರ ಪರಿಸರ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುಮಾರು 200ಕ್ಕೂ ಹೆಚ್ಚು ಕಾನೂನುಗಳನ್ನು, ಪರಿಸರ ಕಾಯಿದೆಗಳನ್ನು ಜಾರಿಗೆ ತಂದಿವೆ. ಇಷ್ಟೆಲ್ಲಾ ಕಾನೂನುಗಳು ಜಾರಿಯಾಗಿದ್ದರೂ ಪರಿಸರ ಶೋಷಣೆ ಮಾತ್ರ ನಿಂತಿಲ್ಲ. ಪರಿಸರ ರಕ್ಷಣೆ ಕಾನೂನಿನಿಂದ ಅಲ್ಲ ಜನರ ಮನೋಭಾವ ಬದಲಾವಣೆಯಿಂದ ಮಾತ್ರ ಸಾಧ್ಯ. ತನ್ನಿಮಿತ್ಯ ಈ ಲೇಖನ. ಪರಿಸರ ಸಂಪನ್ಮೂಲಗಳ ಬಳಕೆಗೆ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು, ಪರಿಸರ ಸಂಪನ್ಮೂಲಗಳ ಅತಿಬಳಕೆಯನ್ನು ನಿಯಂತ್ರಿಸಿ ಪರಿಸರವನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಶಕ್ತಿಶಾಲಿಯಾದ ಕಾನೂನುಗಳು ಇಂದು ಅವಶ್ಯಕ. ಹೊಸ ವಿಷಯವೊಂದು ಬೆಳಕಿಗೆ ಬಂದಾಗ ಮತ್ತು ತಾಂತ್ರಿಕತೆಗಳ ಆವಿಷ್ಕಾರವಾದಾಗ ಹೊಸ ಕಾನೂನುಗಳನ್ನು ತರುವುದು, ಜೊತೆಗೆ ಈಗಿರುವ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿ ಮಾಡುವುದು ಅವಶ್ಯಕ. ಕಾನೂನು, ಕಾಯಿದೆ, ನೀತಿ, ಘೋಷಣೆ, ತಿದ್ದುಪಡಿ ಪರಿಸರ ಸಂರಕ್ಷಣೆಗೆ ಅತ್ಯಗತ್ಯ. 1972ರವರೆಗೂ ಭಾರತದಲ್ಲಿ ಪರಿಸರ ಕಾಯಿದೆಗಳ ಬಗ್ಗೆ ಸೂಕ್ತ ಚೌಕಟ್ಟು ಇದ್ದಂತೆ ತೋರುವುದಿಲ್ಲ. 1972ರಲ್ಲಿ ಸ್ವೀಡನ್ನಿನ ಸ್ಟಾಕ್ ಹೋಂನಲ್ಲಿ ಮಾನವ ಪರಿಸರ ಎಂಬ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಸಮ್ಮೇಳನದ ಆನಂತರ ಪರಿಸರ ಕಾಯಿದೆಗಳಿಗೆ ಸೂಕ್ತ ಚೌಕಟ್ಟನ್ನು ಒದಗಿಸುವ ಪ್ರಯತ್ನಗಳು ನಡೆದವು. ಭಾರತದಲ್ಲಿ 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಪರಿಸರ ಸಂರಕ್ಷಣೆ ಪದವನ್ನು ಮೊಟ್ಟಮೊದಲು ಬಳಸಲಾಯಿತು. 1972ರ ಪೂರ್ವದಲ್ಲಿ ಕೆಲವು ಪಾರಿಸಾರಿಕ ಸಮಸ್ಯೆಗಳ ನಿವಾರಣೆಗೆ ಹಲವು ಕಾಯಿದೆಗಳನ್ನು ಹೊರತರಲಾಗಿತ್ತು. 1853ರಲ್ಲಿ ಜಾರಿಯಾದ ಹೊಗೆ ನಿಯಂತ್ರಣ(ಮುಂಬೈ ಮತ್ತು ಕೋಲ್ಬ) ಕಾಯಿದೆ, 1863 ಕಲ್ಕತ್ತ ನಗರವು ಯುರೋಪಿಯನ್ ದೇಶಗಳಿಗಿಂತ ಮುಂಚೆಯೇ ಧೂಮಪಾನವನ್ನು ನಿಷೇಧಿಸುವ ಕಾನೂನನ್ನು ಹೊರ ತಂದಿತ್ತು. 1882ರಲ್ಲಿ ಜಾರಿಗೆ ಬಂದ ಭಾರತೀಯ ಅನುಭೋಗಿ ಹಕ್ಕಿನ ಕಾನೂನು ಜಲಮಾಲಿನ್ಯಕ್ಕೆ ಸಂಬಂಧಿಸಿದಂತೆ ಕೆಲವು ಹಕ್ಕುಗಳನ್ನು ಒತ್ತಿ ಹೇಳಿತು. 1972ರಲ್ಲಿ ಸ್ಟಾಕ್ ಹೋಂ ಸಮ್ಮೇಳನದ ಅನಂತರ, ಭಾರತದಲ್ಲಿ ಕೇಂದ್ರ ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ರಾಷ್ಟ್ರೀಯ ಪರಿಸರ ನೀತಿ ಮತ್ತು ಯೋಜನಾ ಪರಿಷತ್ತು ರಚಿತವಾಯಿತು. ಇದು ಕ್ರಮೇಣ ಪರಿಸರ ಮತ್ತು ಅರಣ್ಯ ಸಚಿವಾಲಯವಾಗಿ ಅಭಿವೃದ್ಧಿಗೊಂಡಿತು. ಇಂದು ಪರಿಸರ ಸಂರಕ್ಷಣೆಯನ್ನು ನಿಯಂತ್ರಿಸುತ್ತಿರುವ ಪ್ರಧಾನ ಆಡಳಿತ ಸಂಸ್ಥೆಯೇ ಇದು. ಇದರೊಂದಿಗೆ ಅಸಂಪ್ರದಾಯಿಕ ಶಕ್ತಿ ಆಕರಗಳ ಸಚಿವಾಲಯ ಹಾಗೂ ಇನ್ನಿತರ ಸಂಸ್ಥೆಗಳೂ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪರಿಸರ ಸಂರಕ್ಷಣೆಯಲ್ಲಿ ಸಹಾಯಮಾಡುತ್ತಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯವು ರಚಿತವಾದ ಪರಿಸರ ಕಾಯಿದೆ, ಕಾನೂನುಗಳಿಗೆ ಸೂಕ್ತ ಚೌಕಟ್ಟು ಒದಗಿಸಿತು. ಇದು ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಾಲ ಕಾಲಕ್ಕೆ ಬದಲಾಗುತ್ತಿರುವ ಪರಿಸರ ಸಮಸ್ಯೆಗಳಿಗೆ ಸೂಕ್ತವಾಗಿ ಅನೇಕ ಕಾಯಿದೆ ಕಾನೂನುಗಳನ್ನು ಘೋಷಣೆಗಳನ್ನು ತಿದ್ದುಪಡಿಗಳನ್ನು ಹೊರತಂದಿದೆ. ಕಳೆದ ಶಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಹಲವು ಕಾಯಿದೆಗಳು ಜಾರಿಗೆ ಬಂದವು. ಅಪಾಯಕಾರಿ ತ್ಯಾಜ್ಯ ವಿನಿಯೋಗ ಕಾಯಿದೆ(1989)ಯಿಂದ ಹಿಡಿದು ರಾಷ್ಟ್ರೀಯ ಪರಿಸರ ಅಪೀಲು ವಿಚಾರಣಾ ಅಧಿಕಾರ ಶಾಸನ(1997)ದವರೆಗೂ ವಿವಿಧ ಕಾಯಿದೆಗಳು ಜಾರಿಗೆ ಬಂದಿವೆ. ಅಂದರೆ ಪಾರಿಸರಿಕ ಸಮಸ್ಯೆಗಳ ಸಮಗ್ರ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳುವಂತಹ ಕಾಯಿದೆಗಳು ರಚಿತವಾಗುತ್ತಿವೆ. 1992ರಲ್ಲಿ ಸಂವಿಧಾನ 73 ಮತ್ತು 74ನೆಯ ಕಾಯಿದೆಗಳನ್ನು ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯಿಂದ ಪಂಚಾಯತಿಗಳಿಗೆ ಮತ್ತು ನಗರ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚು ಅಧಿಕಾರ ಪ್ರಾಪ್ತವಾಯಿತು. ಈ ತಿದ್ದುಪಡಿಯು ಪರಿಸರ ನಿರ್ವಹಣೆಯನ್ನು ವಿಕೇಂದ್ರಿಕರಿಸಿ, ಸ್ಥಳೀಯ ಮಟ್ಟದಲ್ಲಿ ಪರಿಸರ ಮತ್ತು ಅಭಿವೃದ್ಧಿಗಳ ನಡುವೆ ಇರುವ ಸಂಬಂಧವನ್ನು ಮತ್ತಷ್ಟು ಹತ್ತಿರ ತಂದಿತು. ಪರಿಸರ ಮತ್ತು ಅಭಿವೃದ್ಧಿಯ ಕುರಿತ ರಾಷ್ಟ್ರೀಯ ಸಂರಕ್ಷಣಾ ಕಾರ್ಯತಂತ್ರ ಮತ್ತು ನೀತಿಯು(1992) ಈ ಸಂಬಂಧವನ್ನು ಭದ್ರಗೊಳಿಸಿತು. ಪರಿಸರದ ಬಗ್ಗೆ ಎಲ್ಲಾ ಮಟ್ಟಗಳಲ್ಲೂ ಅರಿವು ಹೆಚ್ಚುತ್ತಿರುವಂತೆ ಕಾನೂನು, ಕಾಯಿದೆಗಳೂ ಬಿಗಿಗೊಳ್ಳುತ್ತಿವೆ. ನ್ಯಾಯಾಂಗ ಸಂಸ್ಥೆಗಳು ಎಚ್ಚೆತ್ತುಕೊಳ್ಳುತ್ತಿವೆ ಹಾಗೂ ಹೆಚ್ಚು ಕ್ರಿಯಾಶೀಲವಾಗುತ್ತಿವೆ. ಸರ್ವೋಚ್ಛ ನ್ಯಾಯಾಲಯವು ಪರಿಸರ ಕಾಯಿದೆಗಳನ್ನು ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಉಚ್ಛ ನ್ಯಾಯಾಲಯಗಳನ್ನು ಪ್ರೋತ್ಸಾಹಿಸುತ್ತದೆ. ಇಂದು ಪರಿಸರ ಸಂರಕ್ಷಣೆಯನ್ನು ಕುರಿತು ವಿಶಿಷ್ಟ ನಿಯಮಗಳಿರುವ ಪ್ರಪಂಚದ ಕೆಲವೇ ಸಂವಿಧಾನಗಳಲ್ಲಿ ಭಾರತದ ಸಂವಿಧಾನವೂ ಒಂದು. ಇದು ಪರಿಸರ ರಕ್ಷಣೆ ಹಾಗೂ ಪರಿಸರಾಭಿವೃದ್ಧಿಯತ್ತ ರಾಷ್ಟ್ರದ ಧ್ಯೇಯವನ್ನು ಸ್ಪಷ್ಟಪಡಿಸುತ್ತದೆ. ನ್ಯಾಯಾಂಗದ ಅರ್ಥವಿವರಣೆಯು ಸಂವಿದಾನದ ನಿಯೋಗವನ್ನು ಬಲಪಡಿಸಿದೆ. ಸರ್ವೋಚ್ಛ ನ್ಯಾಯಾಲಯವು ದೂರದೃಷ್ಟಿಯುಳ್ಳ ವಿವೇಕಯುತವಾದ ಪರಿಸರ ಕಾಯಿದೆಗಳ ಅಭಿವೃದ್ಧಿಯ ಕೆಲವು ತತ್ವಗಳನ್ನು ಸೂಚಿಸಿದೆ. ಅವುಗಳಲ್ಲಿ ಮುಖ್ಯವಾದುದೆಂದರೆ, ಸರ್ವೋಚ್ಛ ನ್ಯಾಯಾಲಯವು ರಾಜ್ಯಾಂಗದಲ್ಲಿರುವ ಮಾನವ ಮೂಲಭೂತ ಹಕ್ಕುಗಳನ್ನು ವಿಸ್ತರಿಸಿ ಆರ್ಟಿಕಲ್ 21ನ್ನು ಪರಿಸರ ರಕ್ಷಣೆ ಎಂದು ಇದರಲ್ಲಿ ಸೇರಿಸಿದೆ. ಇದರ ಪ್ರಕಾರ ಯಾವುದೇ ವ್ಯಕ್ತಿಗೆ ಶುಭ್ರ ಪರಿಸರವನ್ನು ಅನುಭವಿಸುವ ಹಕ್ಕಿದೆ. ಹೀಗಾಗಿ ಪರಿಸರವನ್ನು ಮಲಿನಗೊಳಿಸುವ ಯಾವುದೇ ಚಟುವಟಿಕೆಯು ಕಾನೂನು ಬಾಹಿರ. ಆರ್ಟಿಕಲ್ 21, ದಿ ರೈಟ್ ಟು ವೋಲ್ಸಮ್ ಎನ್ವಿರಾನ್ಮೆಂಟ್ ಒಪ್ಪಂದದ ಕಲಮಿನ ಮುಖ್ಯಾಂಶಗಳು ಈ ರೀತಿ ಇವೆ. • ನದಿ ಕಣಿವೆ ಯೋಜನೆ, ಬೈಜಿಕ ಶಕ್ತಿ ಯೋಜನೆ ಮುಂತಾದ ಪರಿಸರ ನಾಶಗೊಳಿಸುವ ಯೋಜನೆಗಳಿಂದ ಜನರನ್ನು ಎತ್ತಂಗಡಿ ಮಾಡಿ ಅವರ ಜೀವನವನ್ನು ಗೊಂದಲಕ್ಕೀಡುಮಾಡಕೂಡದು. (ಜೀವನೋಪಾಯದ ಹಕ್ಕು-ದಿ ರೈಟ್ ಟು ಲೈವ್ಲಿಹುಡ್) • ಯಾವುದೇ ಸಂಸ್ಥೆಯು ಕಟ್ಟುನಿಟ್ಟಾಗಿ ಪರಿಸರ ಕಾಯಿದೆಗಳನ್ನು ಪಾಲಿಸಬೇಕು. • ಸರಕಾರಿ ಸಂಸ್ಥೆಗಳು ಪರಿಸರ ಕಾಯಿದೆಗಳನ್ನು ಪಾಲಿಸಲಾಗದಿದ್ದಲ್ಲಿ ಹಣಕಾಸು, ಮಾನವ ಸಂಪನ್ಮೂಲ ಇತ್ಯಾದಿಗಳ ಕೊರತೆಯ ಕಾರಣವನ್ನು ಕೊಡಬಾರದು. • ಪರಿಸರ ಮಾಲಿನ್ಯಕ್ಕೆ ಕಾರಣರಾದವರು ಮಲಿನತೆಯನ್ನು ಕಡಿಮೆ ಮಾಡುವ/ ನಿರ್ಮೂಲನ ಮಾಡುವ ವೆಚ್ಚವನ್ನು ಭರಿಸಬೇಕು. ಅಂತೆಯೇ ಮಲಿನತೆಯಿಂದ ಪೀಡಿತರಾದವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. • ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಅಧಿಕಾರಿಗಳು ಪರಿಸರ ಮಾಲಿನ್ಯವನ್ನು ಉಹಿಸುವ ತಡೆಗಟ್ಟುವ ಸಾಮಥ್ರ್ಯ ಪಡೆದಿರಬೇಕು. ಕಾರ್ಖಾನೆಗಳು ತಮ್ಮ ಕ್ರಿಯಾ ವಿಧಾನಗಳು, ಪರಿಸರ ಮಾಲಿನ್ಯ ಉಂಟುಮಾಡುವುದಿಲ್ಲವೆಂದು ರುಜುವಾತು ಪಡಿಸಬೇಕು. • ನಿರ್ಣಾಯಕರು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವಾಗ ಪಾರಿಸಾರಿಕ ಅಂಶಗಳ ಬಗ್ಗೆ ಸಾಕಷ್ಟು ಗಮನಹರಿಸಬೇಕು. • ಪರಿಸರ ಕಾಯಿದೆಗಳನ್ನು ಪಾಲಿಸದೇ ಪರಿಸರವನ್ನು ನಾಶಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. • ಪರಿಸರ ಕಾಯ್ದೆಯ ಚೌಕಟ್ಟಿನಲ್ಲಿ ನೀಡಲಾಗಿರುವ ಅಧಿಕಾರವನ್ನು ಪರಿಸರ ರಕ್ಷಣೆಗೆ ಮಾತ್ರವೇ ಬಳಸಬೇಕು. • ನಿಸರ್ಗದಿಂದ ದೊರೆಯುವ ಎಲ್ಲ ನೈಸರ್ಗಿಕ ಸಂಪನ್ಮೂಲಗಳು ಸಾರ್ವಜನಿಕ ಉಪಯೋಗಕ್ಕಾಗಿಯೇ ಇವೆ. ರಾಜ್ಯ ರಾಷ್ಟ್ರವು ಅದರ ಪಾರುಪತ್ಯಗಾರಿಕೆ ಮಾತ್ರ ಮಾಡಬೇಕು. ಕರಾವಳಿ, ನೀರು, ಗಾಳಿ, ಅರಣ್ಯ, ಭೂಮಿ ಇವೆಲ್ಲದರಿಂದ ಉಪಯೋಗ ಪಡೆಯುವವರು ಸಾರ್ವಜನಿಕರಷ್ಟೆ. ಈ ಸಂಪನ್ಮೂಲಗಳನ್ನು ಖಾಸಗಿ ಸಂಪತ್ತನ್ನಾಗಿ ಮಾಡಿಕೊಳ್ಳುವುದು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಹಲವಾರು ಪರಿಸರ ಸ್ನೇಹಿ ಕಾಯ್ದೆಗಳಿವೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಕಾಯ್ದೆ 1972, ವಾಯು ಮಾಲಿನ್ಯ ತಡೆ ಕಾಯ್ದೆ 1981, ಭಾರತೀಯ ಅರಣ್ಯ ಕಾಯ್ದೆ 1927, ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆ 2002, ತ್ಯಾಜ್ಯ ನಿರ್ವಹಣಾ ಕಾಯ್ದೆ 1989, ಇಕೋ ಮಾರ್ಕ ಯೋಜನೆ 1991 ಹೀಗೆ ಒಂದೇ ಎರಡೇ.. ಸ್ವಾತಂತ್ರ್ಯಾನಂತರ ಪರಿಸರ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುಮಾರು 200ಕ್ಕೂ ಹೆಚ್ಚು ಕಾನೂನುಗಳನ್ನು, ಪರಿಸರ ಕಾಯಿದೆಗಳನ್ನು ಜಾರಿಗೆ ತಂದಿವೆ. ಇಷ್ಟೆಲ್ಲಾ ಕಾನೂನುಗಳು ಜಾರಿಯಾಗಿದ್ದರೂ ಪರಿಸರ ಶೋಷಣೆ ಮಾತ್ರ ನಿಂತಿಲ್ಲ. ಪರಿಸರ ರಕ್ಷಣೆ ಕಾನೂನಿನಿಂದ ಅಲ್ಲ ಜನರ ಮನೋಭಾವ ಬದಲಾವಣೆಯಿಂದ ಮಾತ್ರ ಸಾಧ್ಯ. ಹಾಗಾಗಿ ಎಲ್ಲರಲ್ಲೂ ಮೂಡಲಿ ಪರಿಸರ ಪ್ರಜ್ಞೆ.

No comments:

Post a Comment