Monday, 30 March 2020

ವಚನಗಳಲ್ಲಿ ವೈಜ್ಞಾನಿಕ ದೃಷ್ಟಿ


ವಚನಗಳಲ್ಲಿ ವೈಜ್ಞಾನಿಕ ದೃಷ್ಟಿ

ಲೇಖನ-ಡಾ.ಲಿಂಗರಾಜ ರಾಮಾಪೂರ

ವಿಶೇಷ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಸರಕಾರಿ ಪ್ರೌಢಶಾಲೆ,ಕಿರೆಸೂರ ತಾ-ಹುಬ್ಬಳ್ಳಿ

ಮೊ-9964571330

 

 

 ವಚನಗಳು ಜಗತ್ತಿನ ಸಾಹಿತ್ಯದಲ್ಲಿ ತಮ್ಮ ವಿಶಿಷ್ಟ ಸ್ಥಾನವ ಪಡೆದಿವೆ. ವೀರಶೈವ ಶರಣರು ತಮ್ಮ ನೇರ ಹಾಗೂ ಸರಳ ಮಾತುಗಳಲ್ಲಿ ಭಕ್ತಿ, ದೇವರು, ಅನುಭಾವ ಇತ್ಯಾದಿಗಳ ಬಗ್ಗೆ ಅದ್ಭುತವಾಗಿ ಹೇಳಿದ್ದಾರೆ. ಪಂಡಿತರು ದಿಶೆಯಲ್ಲಿ ಸಾಕಷ್ಟು ವಿಶ್ಲೇಷಿಸಿದ್ದಾರೆ. ವಚನಗಳಲ್ಲಿ ವಿಜ್ಞಾನ ವಿಷಯ ಬಂದಿದೆಯೋ ಇಲ್ಲವೋ ಅನಿಸಬಹುದು. ಆದರೆ ಕೆಲವೊಂದು ವಚನಗಳಲ್ಲಿ ವಿಜ್ಞಾನ ವಿಪುಲವಾಗಿ ದೊರೆಯುತ್ತದೆ. ಇಂಥಹ ವಚನಗಳನ್ನು ಆರಿಸಿ ತೆಗೆದು ಅವುಗಳಲ್ಲಿ ಇರುವ ವಿಜ್ಞಾನವನ್ನು ಒಡೆದು ವಿವರಿಸಿದರೆ ಸೋಜಿಗ ಎನಿಸಬಹುದು.

 ಬಸವಣ್ಣನವರ ವಚನಗಳಲ್ಲಿ ಆಕಾಶ, ಆಕಾಶಕಾಯಗಳ ಆಗಾಧ ಜ್ಞಾನವಿದೆ. ಚಿತ್ತದ ಚಂಚಲತೆ, ಏಕಾಗ್ರತೆಗಳ ಮನಃಶಾಸ್ತçವಿದೆ. ಕಾಗೆ, ಕೋಳಿ, ಕೋಗಿಲೆ, ಹಂಸಗಳ ಜೀವನದ ಪಕ್ಷಿ ವಿಜ್ಞಾನವಿದೆ. ನಡೆ ನುಡಿಗಳ ಅಂತರ, ಹೊಂದಿಕೆಗಳ ವರ್ತನಾ ವಿಜ್ಞಾನವಿದೆ. ಕಪ್ಪೆ, ಸರ್ಪ, ಶ್ವಾನ ಮೊದಲಾದ ಜೀವನ ಜಾಲ ಬಿಡಿಸುವ ಪ್ರಾಣಿ ವಿಜ್ಞಾನವಿದೆ. ಅಂಥ ಪ್ರಾಣಿ ವಿಜ್ಞಾನದ ಅಂಶವಾಗಿರುವ ಚೇಳಿನ ಬಸುರಿನ ಕುರಿತು ಹೇಳುವ ವಚನ ಹೀಗಿದೆ.

ಚೇಳಿಂಗೆ ಬಸುರಾಯಿತ್ತೆ ಕಡೆ

ಬಾಳೆಗೆ ಫಲವಾಯಿತ್ತೆ ಕಡೆ

ರಣರಂಗದಲ್ಲಿ ಕಾದುವ ಓಲೆಕಾರಂಗೆ ಓಸರಿಸಿತ್ತೆ ಕಡೆ

ಮಾಡುವ ಭಕ್ತನ ಮನ ಹೀನವಾದರೆ

ಅದೇ ಕಡೆ ಕೂಡಲಸಂಗಮದೇವ//

                ಮಾಡುವ ಭಕ್ತನ ಮನ ಹೀನವಾದರೆ ಅವನ ಸಾಧನೆಗೆ ಅದೇ ಕಡೆಎಂಬುದನ್ನು ಪ್ರತಿಪಾದಿಸಲು ಬಸವಣ್ಣನವರು ಮೂರು ಉದಾಹರಣೆಗಳನ್ನು ನೀಡಿದ್ದಾರೆ. ಯುದ್ಧದಲ್ಲಿ ಕಾದುವ ಯೋಧನ ಮನ ಅಳುಕಿದರೆ ಅವನ ಪ್ರಾಣಕ್ಕೆ ಅದೇ ಕಡೆಯಾಗುತ್ತದೆ. ಬಾಳೆಯ ಗಿಡ ಬದುಕಿನಲ್ಲಿ ಒಂದೆ ಬಾರಿ ಫಲ ನೀಡಿ ತನ್ನ ಫಲಿತತೆಗೆ ಕೊನೆ ಹಾಡುತ್ತದೆ ಇವೆರಡು ಉದಾಹರಣೆಗಳನ್ನು ಅರ್ಥೈಸಿಕೊಳ್ಳಲು ಹೆಚ್ಚಿನ ಕಷ್ಟಪಡಬೇಕಾಗಿಲ್ಲ. ಆದರೆ ವಚನದ ಮೊದಲ ಪಂಕ್ತಿಯಾದಚೇಳಿಂಗೆ ಬಸುರಾಯಿತ್ತೆ ಕಡೆಎಂಬುದು ಜಿಜ್ಞಾಸೆಗೆ ಹಚ್ಚುತ್ತದೆ.

                ಮರಿಗಳು ಚೇಳಿನ ಹೊಟ್ಟೆಯಿಂದ ಹೊರಬಂದು ತಾಯಿಚೇಳು ಸಾಯುವುದಿಲ್ಲ. ಚೇಳಿನ ಮುಂದಿರುವ ಎರಡು ಕೊಂಡಿಗಳ ಮಧ್ಯದಲ್ಲಿರುವ ಬಾಯಿಯ ಕೆಳಗಡೆ ಇರುವ ರಂದ್ರದಿA ಮರಿಗಳು ಹೊರಬರುತ್ತವೆ. ಬಹು ಜನರ ನಂಬಿಕೆಯAತೆ ಮರಿಹಾಕಿದ ತಾಯಿ ಚೇಳು ಸಾಯುವುದಿಲ್ಲ.

                ಹಾಗಾದರೆಚೇಳಿಂಗೆ ಬಸುರಾಯಿತ್ತೆ ಕಡೆಎಂಬ ಹೇಳಿಕೆಗೆ ಅರ್ಥವೇನು? ಪ್ರಶ್ನೆಯ ಹಿಂದಿರುವ ವೈಜ್ಞಾನಿಕ ಸತ್ಯವೆಂದರೆ ಗಂಡುಚೇಳು ಹಾಗೂ ಹೆಣ್ಣುಚೇಳು ಮಿಲನವಾದಾಗ ಮಿಲನದ ಅಂತ್ಯದಲ್ಲಿ ಹೆಣ್ಣುಚೇಳು, ಗಂಡುಚೇಳನ್ನು ಸಾಯಿಸುತ್ತದೆ. ಜೇಡರ ಹುಳುವೂ ಹಾಗೆಯೇ. ಒಂದು ಬಾರಿಗಂಡು ಚೇಳನ್ನು ಸಾಯಿಸಿ ಮರಿಹಾಕಿದ ಹೆಣ್ಣುಚೇಳಿನ ಸಮೀಪಕ್ಕೆ ಮತ್ಯಾವ ಗಂಡುಚೇಳುಗಳು ಬರುವುದಿಲ್ಲ. ಮರಿಹಾಕಿದ ಹೆಣ್ಣುಚೇಳಿನಿಂದ ಸಿಗುವ ಸಂಕೇತಗಳಿA ಗಂಡುಚೇಳುಗಳು ಹೆಣ್ಣುಚೇಳಿನ ಹತ್ತಿರ ಸುಳಿಯುವುದಿಲ್ಲ. ಸುಳಿದು ಸಾಯುವುದೂ ಇಲ್ಲ.

                ಎಲ್ಲ ವಿವರಣೆಗಳಿಂದ ಸಿಗುವ ಅಂತಿಮ ಉತ್ತರವೆಂದರೆ ಚೇಳಿಂಗೆಬಸುರುಕಡೆಯೇ ವಿನಹಬದುಕುಕಡೆ ಅಲ್ಲ. ಸಾಕಷ್ಟು ಪ್ರಯೋಗ ಹಾಗೂ ಅಭ್ಯಾಸಗಳಿಂದ ಇಂದಿನ ಸತ್ಯವನ್ನು ಎಂಟನೂರು ವರ್ಷಗಳ ಹಿಂದೆ ಅಂದೇ ಹೇಳಿದ ಬಸವಣ್ಣವನರ ಪ್ರಾಣಿವಿಜ್ಞಾನದ ಅಗಾಧ ಜ್ಞಾನಕ್ಕೆ ಯಾರಾದರೂ ತಲೆದೂಗಲೇಬೇಕು.

ಪ್ರಸಾದ ಕಾಯವ ಕೆಡಿಸಲಾಗದು, ಕೆಡಿಸಲಾಗದುಮತ್ತೊಂದು ವಚನದ ಸಾಲು.

                ಇದು ಚನ್ನ ಬಸವಣ್ಣನ ಹೇಳಿಕೆ. ಹೇಳಿಕೆಯಲ್ಲಿ ದೈಹಿಕ ಆರೋಗ್ಯದ ಬಗ್ಗೆ ಆಸ್ಥೆ ವಹಿಸಲು ಸೂಚನೆ ಕೊಡಲಾಗಿದೆ. ದೇಹವು ಅಮೂಲ್ಯವಾದುದು. ಇದನ್ನು ನಾವೇ ತಯಾರಿಸಲು ಸಾಧ್ಯವಿಲ್ಲ. ಇದು ನಮಗೆ ಪ್ರಸಾದದ ರೂಪದಲ್ಲಿ ದೊರೆತಿದೆ. ಕಾರಣ ಇದು ಪವಿತ್ರವಾದದ್ದು. ಇಂತಹ ದೇಹವನ್ನು ನಿರ್ಲಕ್ಷಿಸಿ ಕೆಡಿಸಿದರೆ ಇಡೀ ಜೀವನವೇ ಹಾಳಾಗುತ್ತದೆ. ಪ್ರಸಾದ ಕಾರ್ಯವನ್ನು ಕೆಡಿಸುವುದೆಂದರೆ ಹಲವಾರು ಚಟಗಳನ್ನು ಹಚ್ಚಿಕೊಳ್ಳುವ ವ್ಯಸನಗಳನ್ನು ಬೆಳೆಸುವುದು. ಕೆಟ್ಟಮಾರ್ಗದಲ್ಲಿ ನಡೆಯುವುದು ಇತ್ಯಾದಿ. ಇಂತಹ ಚಟಗಳು, ವ್ಯಸನಗಳು ಹಾಗೂ ತಪ್ಪು ಪದ್ಧತಿಗಳು ದೇಹಕ್ಕೆ ಹಾನಿ ಮಾಡುವವು. ಪವಿತ್ರ ದೇಹವು ಹಲವಾರು ತೊಂದರೆಗಳಿA ಬಳಲುವುದು. ಅಲ್ಲದೇ ಹಾನಿಗೊಳಗಾಗುವುದು. ಆದ ಹಾನಿಯನ್ನು ನಾವು ದುರಸ್ತಿ ಮಾಡಲು ಸಾಧ್ಯವಾಗುವುದಿಲ್ಲ. ಕೆಟ್ಟು ಹೋದ ಅಂಗಾAಗಗಳನ್ನು ಮರಳಿ ಸರಿಯಾಗಿ ದಾರಿಗೆ ತರಲಾಗುವುದಿಲ್ಲ. ಆದ್ದರಿಂದಲೇ ಕಾರ್ಯವನ್ನು ಸರಿಯಾಗಿಟ್ಟುಕೊಂಡು ಆರೋಗ್ಯ ಕಾಪಾಡಬೇಕು.

ಆಹಾರವ ಕಿರಿದು ಮಾಡಿರಯ್ಯ

ಆಹಾರದಿಂದ ವ್ಯಾಧಿ ಹಬ್ಬಿ ಬಲಿಯುವುದಯ್ಯ

ಆಹಾರದಿಂ ನಿದ್ರೆ, ತಾಮಸ, ಮೈಮರೆವು

ತಾಮಸದಿಂ ಅಜ್ಞಾನ ಹೆಚ್ಚಿ ಕಾಯವಿಕಾರ

ಮನೋವಿಕಾರ, ಭಾವವಿಕಾರ, ಇಂದ್ರಿಯವಿಕಾರ

ವಾಯುವಿಕಾರ, ಇಂಥ ಪಂಚ ವಿಕಾರಗಳನ್ನುಂಟು ಮಾಡಿ

ಸೃಷ್ಟಿಗೆ ತಂದುದಾದ ಕಾರಣ ಕಾಯದ ಅತಿ ಪೋಷಣೆ

ಮೃತ್ಯುವಾದುದು

ಜಪ, ತಪ, ಧ್ಯಾನ, ಧಾರಣ. ಪೂಜೆಗೆ ಸೂಕ್ಷö್ಮದಿಂದ

ತನು ಮಾತ್ರವಿದ್ದರೇ ಸಾಲದೇ? ತನುವ ಪೂಷಿಸುವ

ಆಸೆ ವಿಘ್ನವೆಂಬುದು

ತನು ಪೋಷಣೆಯಿಂದ

ತಾಮಸ ಹೆಚ್ಚಿ ಅಜ್ಞಾನದಿಂದ ವಿರಕ್ತಿ ಹಾನಿ

ಅರಿವು ನಷ್ಟ ಪರವು ದೂರ

ನಿಲುವಿಲ್ಲದ ಕಾರಣ ಚೆನ್ನಮಲ್ಲಿಕಾರ್ಜುನ

ಒಲಿಸಿಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯ

                ವಚನ ನಿಜವಾಗಿ ವೈದ್ಯರು ಬರೆದುಕೊಟ್ಟ ಔಷಧ ಚೀಟಿಯಂತಿದೆ. ಇಲ್ಲವೇ ವೈದ್ಯರು ಹೇಳುವ ಪಥ್ಯೆಯಂತೆ ಇದೆ. ಅಕ್ಕಮಹಾದೇವಿಗೆ ಇಲ್ಲಿ ದೈಹಿಕ ಹಾಗೂ ಇತರ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ನೇರವಾಗಿ ಅಕ್ಕಮಹಾದೇವಿ ಹೇಳುವ ಸಂಗತಿ ಎಂದರೆ ಕಾಯವನ್ನು ನಾವು ಪಡೆದದ್ದು ಚೆನ್ನಮಲ್ಲಿಕಾರ್ಜುನನ್ನು ಒಲಿಸಲು ಕಾರಣ ಕಾಯವನ್ನು ಕೆಡಿಸಬಾರದು. ಕಾಯವನ್ನು ಕೆಡಿಸುವ ಪ್ರಮುಖ ಕಾರಣವೆಂದರೆ ದೇಹದ ಅತಿ ಪೋಷಣೆ. ಇದನ್ನು ತಡೆದರೆ ಹಲವಾರು ತೊಂದರೆಗಳನ್ನು ದೂರಿಡಬಹುದು ಎಂಬ ತಿಳುವಳಿಕೆ ಅಕ್ಕನದು. ಇದು ವೈಜ್ಞಾನಿಕ ದೃಷ್ಟಿಯಲ್ಲದೇ ಇನ್ನೇನು?

                ನಾವು ನಮ್ಮ ಆಹಾರವನ್ನು ಅಂದರೆ ಊಟವನ್ನು ಕಿರಿದು ಮಾಡಬೇಕು. ಅತಿ ಆಹಾರ ಸೇವಿಸುವುದರಿಂದ ನಿದ್ರೆ ಹೆಚ್ಚಾಗುವುದು. ಅದರೊಡನೆ ತಾಮಸ ಪ್ರವೃತ್ತಿ ಹೆಚ್ಚಾಗುವುದು. ಮೈ ಅರಿವು ತಪ್ಪಿ ಜ್ಞಾನವು ಕಡಿಮೆಯಾಗುವುದು. ಕಾಯ ವಿಕಾರಗಳಲ್ಲಿ ದೇಹದ ಬೊಜ್ಜು ಹೆಚ್ಚುವುದು. ಬೊಜ್ಜು ಹೆಚ್ಚಾದಂತೆ ಸಂಧಿವಾತ ಕಾಣುವುದು. ರಕ್ತದ ಒತ್ತಡ ಹೆಚ್ಚುವುದು. ಹೃದಯ ತನ್ನ ಕಾರ್ಯದಲ್ಲಿ ಸೋಲತೊಡಗುವುದು. ಹೃದಯ ಸೋತಂತೆ ಪುಪ್ಪಸಗಳ ಕಾರ್ಯ ಕಡಿಮೆಯಾಗುವುದು. ಇದರಿಂದ ಶ್ವಾಸದ ತೊಂದರೆ ಕಾಣುವುದು. ರಕ್ತದ ಒತ್ತಡ ತಾಳಲಾರದೆ ಮೂತ್ರಪಿಂಡಗಳು ಸೋಲುವವು. ಕಣ್ಣುಗಳ ಕೆಲಸ ಕಡಿಮೆಯಾಗುವುದು. ಮಧುಮೇಹ ಬರುವುದು. ಕಡೆಗೆ ದೇಹದಲ್ಲಿ ವಾತ ಸೇರುತ್ತದೆ. ವಾತ ಹೆಚ್ಚಾಗಿ ಬರುವ ರೋಗಗಳು ವ್ಯಕ್ತಿಯನ್ನು ಜರ್ಜಿರಿತಗೊಳಿಸುವುದು. ಆದ್ದರಿಂದ ಪಂಚ ವಿಕಾರಗಳು ಕಾಣಿಸಿಕೊಂಡು ವ್ಯಕ್ತಿ ಮರಣ ಹೊಂದುವನು.

                ಕಾಯದ ಅತಿ ಪೋಷಣೆಯ ಬದಲಾಗಿ ಅಕ್ಕಮಹಾದೇವಿ ಜಪ, ತಪ, ಧ್ಯಾನ, ಧಾರಣಗಳನ್ನು ಸೂಚಿಸುತ್ತಾಳೆ. ಸೂಕ್ಷö್ಮ ಶರೀರದಿಂದ ಧ್ಯಾನ, ಪೂಜೆ ಮಾಡಲು ಸಾಧ್ಯ ಎನ್ನುತ್ತಾಳೆ.

ಕೆರಿದ ತಲೆ, ತೊನೆವ ನಡೆಯ, ಹಣೆಯ ಬುಗುಟಿನ

ಕರಸ್ಥಲದ ಅನಿಮಿಷದಿಂದ ಬಹಿರಂಗದ ನತಪ್ಪಿ

ಇದಿರು ಕಿವಿ, ಜೋಲುವ ರಕ್ತಧಾರೆಯ, ಗಾಳಿಯ ಗೊಯಿಲು ತಾಗಿ

ಪುರ್ಬೊಡೆದು ಕಣ್ಣು ತರಿದು

ಧೂಳಿಯ ಮಳೆಯ ಜೋರಿಯ, ಬೆನ್ನ ಬಾಸುಳದ

ಎಡಬಲದ ಬರಿಯ ತದ್ದಿನ, ಮುಳ್ಳುದರಹಿನ

ಕಂಕುಳ ಸೀಳ ಕಂಡು ನೋಡುವ ಜನರು ಬೆರಗಾಗೆ

ಪೊರವಾರಿನ ಮರೆಯ ದಿಗಂಬರದ ಬಣಗು ಸುರಿವುತ್ತ

ಅಪ್ಯಾಯನವನರಿತು, ಬಿದ್ದು ಮೊಳಕಾಲೊಡೆದು

ಹೊಸ ಹುಣ್ಣಿನ ರಕ್ತದ ಜೋರು ಹರಿದು

ಮುಂಗಾಲ ಕಣಿಒಡೆದು, ಕಣಕಾಲ ಸಂದು ತಪ್ಪಿ

ಕಿರುಬೆರಳು ಎಡಹಿ, ಹೆಬ್ಬೊಟ್ಟೊಡೆದ ಗಾಯದ

ಉಗುರು ಟೊಂಕದ, ಪೆರಚುಗಂಟಿನ ನೋಡಾ ಚೆನ್ನಬಸವಣ್ಣ

ಅತ್ಯಂತ ಮಲಿನ ಕೂಡಲಸಂಗಮದೇವರ ಕುರುಹು ವಿಪರೀತ

ನೋಡುವಡೆ ಭಯಂಕರವಾಗಿದೆ ನೋಡಯ್ಯಾ

                ವಚನದಲ್ಲಿ ಬಸವಣ್ಣ ಚೆನ್ನಬಸವಣ್ಣನಿಗೆ ಕೂಡಲಸಂಗದೇವನನ್ನು ಗುರುತಿಸಲು ಕುರುಹುಗಳನ್ನು ಹೇಳುತ್ತಾನೆ. ಮಹಾಮನೆಗೆ ಸಾವಿರ ಜಂಗಮರು ಬರುತ್ತಾರೆ ಹೋಗುತ್ತಾರೆ. ಜನಸಾಗರದಲ್ಲಿ ಕೂಡಲಸಂಗಮದೇವನನ್ನು ಹೇಗೆ ಪತ್ತೆ ಹಚ್ಚುವುದು? ಕುರುಹುಗಳನ್ನು ಒಂದೊAದಾಗಿ ಹೇಳುತ್ತಾನೆ. ಇವೆಲ್ಲವುಗಳನ್ನು ಕೂಲಂಕುಷವಾಗಿ ನೋಡಿದರೆ ವರ್ಣನೆ ಕುಷ್ಠರೋಗಿಯ ವರ್ಣನೆ ಅನಿಸುತ್ತದೆ. ವರ್ಣನೆ ಎಷ್ಟು ಸೂಕ್ಷö್ಮವಾಗಿದೆ ಎಂದರೆ ಇದನ್ನು ವೈದ್ಯರು ಸಹ ಇಷ್ಟು ವಿವರವಾಗಿ ಹೇಳಲು ಆಗಲಿಕ್ಕಿಲ್ಲ.

 ಕುಷ್ಠರೋಗದ ಗಾಯಗಳು ಚರ್ಮದ ಬುಡದಲ್ಲಿ ಕುಳಿತಿರುತ್ತವೆ. ಕೂದಲಿನ ಬೇರುಗಳನ್ನು ಹಿಡಿದುಕೊಂಡು ಅತ್ತಿತ್ತ ಎಳೆದಿರುತ್ತವೆ. ಇಂಥ ಕೂದಲುಗಳನ್ನು ನಾವು ಎಷ್ಟು ಬಾಚಿದರೂ ಸಹ ಅವು ಕೆದರಿದಂತೆ ಕಾಣುತ್ತವೆ. ಇದೂ ಒಂದು ಕುಷ್ಠರೋಗಿಯ ಲಕ್ಷಣ. ಎರಡನೇ ಸಂಗತಿ ಎಂದರೆ ತೊನೆಯ ನಡೆಯ, ವ್ಯಕ್ತಿಯ ಚಲನೆ ತೊನೆಯಿಂದ ಕೂಡಿರುತ್ತದೆ. ಗಾಯಗೊಂಡ ನರಗಳು ಸರಿಯಾದ ಸ್ಪರ್ಶಜ್ಞಾನ ಕೊಡುವುದಿಲ್ಲ. ಕಾರಣ ವ್ಯಕ್ತಿ ತೊನೆಯುತ್ತ ಅಂದರೆ ಜೋಲಿ ಹೊಡೆಯುತ್ತ ಚಲಿಸುವನು. ಇದೂ ಸಹ ಕುಷ್ಠರೋಗದ ಲಕ್ಷಣವೇ. ಮೂರನೆಯದು ಹಣೆಯ ಮೇಲೆ ಬುಗುಟಿಯ ತರಹದ ಗಾಯಗಳು ಇರುವುದು. ರೋಗದ ಗಂಟುಗಳು ಉಬ್ಬಿ ನಿಲ್ಲುವುದರಿಂದ ಹಣೆಯು ಗಂಟುಗAಟಾಗಿರುತ್ತದೆ. ಇದನ್ನು ಸಿಂಹಮುಖಿ ಎಂದು ವರ್ಣಿಸುತ್ತಾರೆ.

                ಹೀಗೆ ಇಲ್ಲಿ ಬರುವ ಪ್ರತಿಯೊಂದು ವಿವರಣೆ ಕುಷ್ಠರೋಗದ ಲಕ್ಷಣವಾಗಿದೆ. ಶರಣರು ರೋಗವನ್ನು ಇಷ್ಟು ಕೂಲಂಕುಷವಾಗಿ ವರ್ಣಿಸಿರುವುದು ನಂಬಲಾಗದ ವಿಷಯ ಅನ್ನಿಸುತ್ತದೆ.

ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯ್ತು

ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕಡು ಕಠಿಣವಾಯಿತು

                ಇದು ಬಸವಣ್ಣನವರ ವಚನದ ಒಂದು ತುಂಡು. ಇದರಲ್ಲಿ ಬಸವಣ್ಣ ಬಿಸಿಲಿನ ಪ್ರಕಾರಗಳ ಬಗ್ಗೆ ಹೇಳುತ್ತಾನೆ. ಮುಂಜಾನೆಯ ಎಲೆ ಬಿಸಿಲಿನ ಶಾಖ ಕಡಿಮೆ. ದೇಹದಲ್ಲಿ ವಿಟಮಿನ್ ಡಿ ತಯಾರಿಕೆಗೆ ಇದರಿಂದ ಕೂಸುಗಳ ಎಲುಬು ಮೂಳೆ ಸರಿಯಾಗಿ ಬೆಳೆಯಲು ಸಹಾಯವಾಗುತ್ತದೆ. ವಿಟ್ಯಾಮಿನ್ ಡಿ ಕೊರತೆಯಿಂದ ರಿಕೆಟ್ಸ್ ರೋಗ ಬರುತ್ತದೆ. ಮದ್ಯಾಹ್ನದ ಬಿಸಿಲು ಶಾಖವುಳ್ಳ ತನ್ನ ಪ್ರಭಾವದಿಂದ ಪ್ರತಿ ವಸ್ತು ಸುಡುವಂತೆ ಮಾಡುವುದು. ಜೀವಿಗಳ ತ್ವಚೆಯನ್ನು ಘಾಸಿಗೊಳಿಸುವುದು.

 ಬಡವರ ಭೋಜನ ಮತ್ತು ಶ್ರೀಮಂತರ ಎಡೆಗಳ ನಡುವಿನ ವ್ಯತ್ಯಾಸವನ್ನು ಸಿದ್ಧರಾಮರು ಸ್ಫಷ್ಠವಾಗಿ ವಚನಗಳಲ್ಲಿ ತಿಳಿಸಿದ್ದಾರೆ. ಶ್ರೀಮಂತರ ಆಹಾರಗಳು ದೇಹಕ್ಕೆ ಭೋಜನ ಒದಗಿಸಿ ರೋಗಗಳಿಗೆ ಆಹ್ವಾನವೀಯುತ್ತವೆ ಎಂಬುದನ್ನು ಸಿದ್ಧರಾಮ ಹೇಳುತ್ತಾರೆ. ಕಡಿಮೆ ಆಹಾರ ಮತ್ತು ಹೆಚ್ಚು ಕ್ಯಾಲೋರಿಯಿಲ್ಲದು ಅಮೃತವೆಂದು ಸಿದ್ಧರಾಮ ಹೇಳುತ್ತಾರೆ.

ಚಂದ್ರೋದಯಕೆ ಅಂಬುಧಿ ಹೆಚ್ಚಾದಯ್ಯಾ

ಚಂದ್ರ ಕುಂದೆ, ಕುಂದೂದಯ್ಯಾ

Aದ್ರAಗೆ ರಾಹು ಅಡ್ಡ ಬಂದಲ್ಲಿ

Aಬುಧಿ ಬೊಬ್ಬಿಟ್ಟಿತ್ತೆ ಅಯ್ಯಾ?

ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ

Aದ್ರಮನಡ್ಡ ಬಂದನೆ ಅಯ್ಯಾ?

ಆರಿಗಾರೂ ಇಲ್ಲ, ಕೆಟ್ಟವಂಗೆ ಕಳೆಯಿಲ್ಲ

ಜಗದ ನಂಟು ನೀನೆ ಅಯ್ಯಾ

ಕೂಡಲಸಂಗಮದೇವಾ!

                ವಚನದಲ್ಲಿ ಬಸವಣ್ಣ ನಿಸರ್ಗದ ಕೌತುಕಗಳನ್ನು ವಿವರಿಸುತ್ತಾನೆ. ಚಂದ್ರನಿಗೆ ಮತ್ತು ಸಮುದ್ರಕ್ಕೆ ಪರಸ್ಪರ ಸ್ಪಂದನವಿದ್ದಾಗ್ಯೂ ಚಂದ್ರನಿಗೆ ರಾಹು ಅಡ್ಡ ಬಂದಾಗ ಚಂದ್ರನಿಗೆ ಸಮುದ್ರವನ್ನು ಅಗಸ್ಯ÷್ತಮುನಿ ಆಪೋಶನಗೊಂಡಾಗ ಸಮುದ್ರಕ್ಕೆ ಚಂದ್ರನಾಗಲಿ ಅಥವಾ ಯಾರೂ ಸಹಾಯಕ್ಕೆ ಬರಲಿಲ್ಲ ಎಂಬ ಕುತೂಹಲದ ಸಂಗತಿಯನ್ನು ಬಸವಣ್ಣನವರು ಹೇಳಿದ್ದಾರೆ.

 ಆಕಾಶಕಾಯಗಳ, ಗ್ರಹಣಗಳು, ಪ್ರಕೃತಿಯ ನಿಗೂಢತೆಗಳ ಬಗ್ಗೆ ಇದ್ದ ಶರಣರ ಜ್ಞಾನವನ್ನು ಮೆಚ್ಚಲೇಬೇಕು.

ಜಗದ ಕರ್ತ ಜಗದ ಸ್ಥಿತಿ ಗತಿಯ ನಡೆಸುವ ಪರಿಯನ್ನು

ಆವಂಗೆ ಆವಂಗೆ ಅರಿಯಬಾರದು

ಅಕಟಕಟಾ ದೇವದಾನವ ಮಾನವರೆಲ್ಲ

ಅಹಂ ಎಂದು ಅಹಂಕಾರದಿ ಕೆಟ್ಟರಲ್ಲ

ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೆ ರಚಿಸಿದ ರಚನೆ

                ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ ಜೀವಾತ್ಮಗಳಿಂದಾದ ಅಷ್ಟತನುವನ್ನು ಜಗಸ್ಥಿತಿ ಎಂದು ಚೆನ್ನಬಸವಣ್ಣನವರು ವಚನದಲ್ಲಿ ಕರೆದಿದ್ದಾರೆ. ಮಹಾಕರ್ತನು ವಿನೋದಕದಲ್ಲಿ ರಚಿಸಿದ ತನುವಿನಲ್ಲಿ ಜೀವಾತ್ಮ, ಅಂತರಾತ್ಮ, ಪರಮಾತ್ಮ ಎಂಬ ಆತ್ಮತ್ರಯಗಳಿವೆ. ದೇಹಭಾವದ ವ್ಯವಹಾರದಿಂದ ತನ್ನ ತಾ ಮರೆಯದಿರುವ ಆತ್ಮನೆ ಜೀವಾತ್ಮನು. ದೇಹದ ಜಡತ್ವವನ್ನು ಕಂಡು ತಾನಾರು ಎಂದು ಚಿಂತಿಸುವ ಆತ್ಮನೇ ಅಂತರಾತ್ಮನು. ತನ್ನ ತತ್ವನರಿತು ಪರತತ್ವದಲ್ಲಿ ಪರಮಕಾಷ್ಠೆಯನೆಯ್ದಿರುವ ಆತ್ಮನೆ ಪರಮಾತ್ಮ ಎಂದು ಹೇಳಲಾಗಿದೆ. ಜೀವಾತ್ಮಕ್ಕೆ ಒಂಭತ್ತು ಜನ ಮೇಲ್ವಿಚಾರಕರು. ಹದಿನಾಲ್ಕು ಜನ ನಿಯೋಗಿಗಳು. ಇಪ್ಪತ್ತಾರು ಜನ ಅನುಚರರು ನಡೆಸುವರೆಂದು ಚೆನ್ನಬಸವಣ್ಣನವರು ಹೇಳಿದ್ದಾರೆ.

ಲೋಕದ ಚೇಷ್ಟೆಗಳಿಗೆಲ್ಲಾ ರವಿ ಮೂಲ

                ಅಕ್ಕಮಹಾದೇವಿ ವಚನದ ಸಾಲುಗಳನ್ನು ಹೇಳುತ್ತಾಳೆ. ಒಂದು ಸಣ್ಣ ವಾಕ್ಯದಲ್ಲಿ ಇಡೀ ಸೋಲಾರ್ ಎನರ್ಜಿ ಅಥವಾ ಸೂರ್ಯಶಕ್ತಿಯ ಬಗ್ಗೆ ಹೇಳಿದಂತಾಗುತ್ತದೆ. ನಿಸರ್ಗದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಯೂ ಸೂರ್ಯಶಕ್ತಿಯನ್ನು ಅವಲಂಬಿಸುತ್ತದೆ. ಮನುಷ್ಯನು ಚಲಿಸುವುದೂ ಸಹ ಸೂರ್ಯಶಕ್ತಿಯಿಂದಲೇ ಎಂದರೆ ಕೆಲವರಿಗೆ ಸುಳ್ಳು ಅನಿಸಬಹುದು. ಆದರೆ ಅದು ನಿಜ. ಮಾನವನಿಗೆ ಆಹಾರ ಬೇಕೇ ಬೇಕು.

 ಸೂರ್ಯಶಕ್ತಿಯನ್ನು ಹೀರಿಕೊಂಡು ಸಸ್ಯಗಳು ಬೆಳೆಯುತ್ತವೆ. ಸೂರ್ಯನ ಶಕ್ತಿ ಇರದೇ ಹೋದರೆ ಸಸ್ಯಗಳು ಬೆಳೆಯಲಾರವು. ಮಾನವನು ತನ್ನ ಆಹಾರಕ್ಕಾಗಿ ಸಸ್ಯಗಳನ್ನು ಸೇವಿಸುವನು. ಆಗಲೇ ಅವನಿಗೆ ಶಕ್ತಿ ಬರುತ್ತದೆ. ತನ್ನ ಕಾಯಕವನ್ನು ಮಾಡುತ್ತಾನೆ.

 ಮೌಂಸಾಹಾರಿಗಳು ನಮ್ಮ ಶಕ್ತಿ ಸೂರ್ಯನಿಂದ ಅಲ್ಲ ಅದು ಮೌಂಸದಿA ಎಂದು ಅನ್ನಲಾಗದು. ಯಾಕೆಂದರೆ ಮೌಂಸ ಕೊಡುವ ಪ್ರಾಣಿಗಳು ಸಸ್ಯಗಳನ್ನು ತಿಂದು ಬದುಕುತ್ತವೆ. ಕಾರಣ ಅಲ್ಲಿಯ ಶಕ್ತಿಯೂ ಸಹ ಸೂರ್ಯ ಶಕ್ತಿ ಎಂದು ಹೇಳಬೇಕು. ನಾವು ನೋಡುವ ಗಾಳಿ, ಮಳೆ, ಹೊಳೆ, ಸಮುದ್ರ ಇತ್ಯಾದಿಗಳೆಲ್ಲ ಸೂರ್ಯಶಕ್ತಿಯ ರೂಪಾಂತರಗಳೇ. ನಾವು ಹಾರಿಸಿದ ಸೆಟಲೈಟ್ಗಳು, ರಾಕೆಟ್ಗಳು ಅಣುಶಕ್ತಿಯೂ ಸಹ ಸೂರ್ಯ ಶಕ್ತಿಯ ಒಂದು ರೂಪ.

 ಹೀಗೆ ಹಲವಾರು ಶಿವಶರಣರ ವಚನಗಳಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಕಾಣಬಹುದಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಮೂಢನಂಬಿಕೆ, ಅಂಧಶೃದ್ಧೆ, ಅಸ್ಪçಶೃತೆ ಮೊದಲಾದ ಜೀವವಿರೋಧಿ ನಿಲುವುಗಳನ್ನು ಸದೆಬಡಿದು ಹೊಸ ವೈಚಾರಿಕ, ವೈಜ್ಞಾನಿಕ ಬದುಕನ್ನು ಕಟ್ಟಲು ತಮ್ಮ ಬದುಕನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು ನುಡಿಯನ್ನು ನಡೆಯಲ್ಲಿ ಪೂರೈಸಿದವರನ್ನು ಕಾಣಬಹುದಾಗಿದೆ.

 

ಆಕರಗಳು

1. ಮಂಗಳಯಾನ-ಕರಾವಿಪ ಬೆಂಗಳೂರು

2. ಎಡೆದೊರೆ ವಿಜ್ಞಾನ-ಕರಾವಿಪ ರಾಯಚೂರು

3. ವೈಜ್ಞಾನಿಕ ದೃಷ್ಟಿ ಮತ್ತು ಶರಣ ಸಾಹಿತ್ಯ-ಪ್ರೊ.ವಿರುಪಾಕ್ಷಪ್ಪ

1 comment:

  1. ಶರಣರು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಅನುಭವ ಸತ್ಯಗಳನ್ನು ವಚನಗಳಲ್ಲಿ ಬಳಸಿದ್ದಾರೆ...
    ಆ ಪ್ರಜ್ಞೆ ಅವರಿಗೆ ಲೋಕಜ್ಞಾನದ ಸೂಕ್ಷ್ಮ ಅವಲೋಕನದಿಂದ ಬಂದಿದೆ...ಅದನ್ನು ಸಮರ್ಥವಾಗಿ ಬಳಸಿದ ಕೀರ್ತಿ ಅವರಿಗೆ ಸಲ್ಲುತ್ತದೆ...

    ReplyDelete