ವೈಜ್ಞಾನಿಕ ಕಥೆ
ಮೂರನೇ ಕಣ್ಣು
(ಅನ್ಯಗ್ರಹದ ಜೀವಿಗಳ ಇರುವಿಕೆ ಬಗ್ಗೆ ಅಲ್ಲಲ್ಲಿ ಕೇಳಿದ್ದೇವೆ. ಹಾರುವ ತಟ್ಟೆಗಳ ಬಗ್ಗೆಯಂತೂ ಕಥೆಗಳು ನೂರಾರು. ನಿಜವಾಗಲೂ ಅನ್ಯಗ್ರಹದಲ್ಲಿ ಜೀವಿಗಳು ಇವೆಯೇ? ಅವುಗಳ ದೇಹ ರಚನೆ ಹೇಗಿದೆ? ಅವು ನಮಗಿಂತ ತಂತ್ರಜ್ಞಾನದಲ್ಲಿ ಮುಂದುವರೆದಿವೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇನ್ನೂ ನಿಗೂಢ. ಈ ಕುರಿತಾಗಿ ಜಗತ್ತಿನಾದ್ಯಂತ ಸಾವಿರಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಈ ಕಥೆ ಕಾಲ್ಪನಿಕವಾಗಿದ್ದು ಅನ್ಯಗ್ರಹದ ಜೀವಿಗಳ ಸಂಶೋಧನೆಯ ಕುರಿತಾಗಿ ವಿವರಿಸುತ್ತದೆ. ಓದಿ ಪ್ರತಿಕ್ರಿಯಿಸಿ.)
-ಲಿಂಗರಾಜ ವೀ. ರಾಮಾಪೂರ
ಭಾಗ 1
ಆ ಕಾಡಿನ ರಸ್ತೆಯಲ್ಲಿ ಕೆಂಪು ಕಾರೊಂದು ಅಂಕುಡೊಂಕಾಗಿ ಚಲಿಸುತ್ತಿತ್ತು. ಭಾರತದ ಕರ್ನಾಟಕ ರಾಜ್ಯದ ಮೈಸೂರು ಊಟಿ ಹೆದ್ದಾರಿಯ ರಮ್ಯ ರಮಣೀಯ ದೃಶ್ಯ. ಒಮ್ಮೇಲೆ ಭಯಂಕರ ಸದ್ದು. ಆಕಾಶದ ಎತ್ತರದಿಂದ ಆಗಾಧವಾದ ಯಾವುದೋ ಒಂದು ವಸ್ತು ಮುಂದೆ ಬಿದ್ದಿತ್ತು. ರಾಜ್ ಕಾರಿನ ಬ್ರೇಕ್ ಹಾಕಿದ್ದ. ತೂಕಡಿಸುತ್ತಿದ್ದ ನಾನು ಥಟ್ಟನೇ ಕಣ್ಣು ಬಿಟ್ಟಿದ್ದೆ.
``ಏಕೆ ಏನಾಯಿತು ರಾಜ್?’’ ನನ್ನ ಪ್ರಶ್ನೆ.
``ಸವಿ, ನೋಡಲ್ಲಿ! ರಸ್ತೆಯಲ್ಲಿ ಬೃಹತ್ ಗಾತ್ರದ ವಸ್ತುವೊಂದು ಬಿದ್ದಿದೆ’’ ರಾಜ್ ಉತ್ತರಿಸಿದ.
ನಾನು ಕುತೂಹಲದಿಂದ ನೋಡುತ್ತಿದ್ದೆ. ರಾಜ್ ಬಹುಶಃ ಅದು ಹಾರುವ ತಟ್ಟೆಯಿರಬೇಕು ಎನ್ನುವಾಗಲೇ ಆ ಹಳದಿ ಬಣ್ಣದ ಹಾರುವ ತಟ್ಟೆಯಿಂದ ದೊಡ್ಡ ದೊಡ್ಡ ಕಣ್ಣುಗಳ, ಪ್ರಾಣಿಗಳ ರೂಪದ, ತಲೆಯ ಮೇಲೆ ಎಂಟೇನಾ ಹೊಂದಿದ್ದ ಎರಡು ಆಕೃತಿಗಳು ಹೊರ ಬಂದು ನಮ್ಮ ಕಡೆಗೆ ಚಲಿಸುತ್ತಿರುವತೆ ಭಾಸವಾಗಿ ನಾವು ಗಾಬರಿಗೊಂಡೆವು. ಯೋಚನೆಗೆ ಇಂಬುಕೊಡದಂತೆ ಕ್ಷಣಾರ್ಧದಲ್ಲಿ ಅವು ನಮ್ಮನ್ನು ಎತ್ತಿಕೊಂಡು ಹೋಗಿದ್ದವು. ಕಣ್ಣು ಬಿಡುವುದರೊಳಗಾಗಿ ನಾವು ಕಾರಿನಿಂದ ಹಾರುವ ತಟ್ಟೆ ಸೇರಿಕೊಂಡಿದ್ದೆವು.
ಅವು ಎತ್ತಿಕೊಂಡು ಹೋಗಿದ್ದೂ ನಮಗೆ ಗೊತ್ತಾಗಿರಲಿಲ್ಲ. ಒಟ್ಟಿನಲ್ಲಿ ವಿಚಿತ್ರ ಕೊಠಡಿಯಲ್ಲಿ ನಮ್ಮನ್ನು ಕೂಡಿಹಾಕಿದ ಅನುಭವ. ಹಾರುವ ತಟ್ಟೆಯ ಒಳಗಿನ ವಿನ್ಯಾಸ ಚಿತ್ರ ವಿಚಿತ್ರವಾಗಿತ್ತು. ಅದೊಂದು ವಿಶಾಲವಾದ ಕೊಠಡಿ. ಅಲ್ಲಲ್ಲಿ ಕಂಪ್ಯೂಟರ್ ಸ್ಕ್ರೀನ್ಗಳು. ಚಿತ್ರ ವಿಚಿತ್ರ ಲೈಟ್ಗಳು. ಅದರಲ್ಲಿನ ಎರಡೂ ಆಕೃತಿಗಳು ಒಂದಕ್ಕೊಂದು ಮಾತನಾಡುತ್ತಿದ್ದವು. ಅವುಗಳ ಮಾತು ನಮಗೆ ಅರ್ಥವಾಗುತ್ತಿರಲಿಲ್ಲ. ವಿಚಿತ್ರವೆಂದರೆ ಆ ಆಕೃತಿಗಳಿಗೆ ತಲೆಯ ಹಿಂದೆ ಕಣ್ಣು. ಅದೂ ಒಂದೇ ಕಣ್ಣು. ಅವು ಅನ್ಯಗ್ರಹದ ಜೀವಿಗಳು. ಅಷ್ಟರಲ್ಲಿ ಹಾರುವ ತಟ್ಟೆ ಚಲಿಸಿದ ಅನುಭವ. ಹಾರುವ ತಟ್ಟೆ ನಮ್ಮನ್ನು ಹೊತ್ತು ಆಕಾಶಕ್ಕೆ ಹಾರಿತ್ತು.
ನಮ್ಮನ್ನು ಎರಡು ಪ್ರತ್ಯೇಕ ಕುರ್ಚಿಗಳಲ್ಲಿ ಕೂಡ್ರಿಸಿ ಲಾಕ್ ಮಾಡಲಾಗಿತ್ತು. ನಾವು ಅವುಗಳನ್ನು ಬಿಟ್ಟು ಮೇಲೆ ಏಳುವಂತಿರಲಿಲ್ಲ. ``ರಾಜ್, ನನಗೆ ಭಯವಾಗುತ್ತಿದೆ’’ ನಾನು ಹೇಳಿದೆ. ``ಸವಿ ಹೆದರಬೇಡ, ನಮ್ಮನ್ನು ಯಾರೋ ಅಪಹರಿಸಿದ್ದಾರೆ’’ ಎಂದು ರಾಜ್ ಹೇಳಿದ.
ಅಷ್ಟರಲ್ಲಿ ಒಂದು ಜೀವಿ ನಮ್ಮ ಮುಂದಿದ್ದ ದೊಡ್ಡ ಸ್ಕ್ರೀನ್ ಮೇಲೆ ಟಚ್ ಮಾಡಿತು. ನಮ್ಮ ಕುರ್ಚಿಗಳ ಮುಂದೆ ಎರಡು ಮಾನಿಟರ್ಗಳು ತೆರೆದುಕೊಂಡವು. ಮತ್ತೊಂದು ಆಕೃತಿ ಮಾತನಾಡಲು ಆರಂಭಿಸಿತು. ಅದು ಮಾತನಾಡುವುದು ಸ್ಕ್ರೀನ್ಗಳ ಮೇಲೆ ಕನ್ನಡದಲ್ಲಿ ಮೂಡಲು ಪ್ರಾರಂಭಿಸಿತು. ನನಗೆ ಇನ್ನೂ ಆಶ್ಚರ್ಯ.
``ನಾವು ಸೋನಿಕ್ಸ್ ಗ್ರಹದಿಂದ ಬಂದಿದ್ದೇವೆ. ನೀವು ನಮ್ಮ ಅತಿಥಿಗಳು. ನಾವು ನಿಮಗೆ ಏನೂ ತೊಂದರೆ ಕೊಡುವುದಿಲ್ಲ. ನಾವು ನಿಮ್ಮ ಬೇಕು ಬೇಡಿಕೆಗಳನ್ನು ಪೂರೈಸುತ್ತೇವೆ. ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ. ದಯವಿಟ್ಟು ನಮ್ಮ ಜೊತೆ ಸಹಕರಿಸಿ’’
``ನಮ್ಮನ್ನು ಬಿಟ್ಟು ಬಿಡಿ, ನಾವು ಮನೆಗೆ ಹೋಗಬೇಕು. ನಮ್ಮನ್ನು ಬಿಟ್ಟುಬಿಡಿ.ನಿಮ್ಮ’’ ರಾಜ್ ಕಿರುಚಿದ.
``ಈಗಾಗಲೇ ನಾವು ಭೂ ಗ್ರಹದಿಂದ ಹೊರಟಾಗಿದೆ. ನಾವು ನಿಮ್ಮ ಮೇಲೆ ಕೆಲ ಪ್ರಯೋಗಗಳನ್ನು ಮಾಡುವವರಿದ್ದೇವೆ. ನಮ್ಮ ಪ್ರಯೋಗಗಳು ಮುಗಿದ ತಕ್ಷಣ ನಿಮ್ಮನ್ನು ವಾಪಸ್ ಕಳುಹಿಸಿಕೊಡುತ್ತೇವೆ’’ ಮತ್ತೊಂದು ಜೀವಿ ಹೇಳಿತು.
``ಸಾಧ್ಯವಿಲ್ಲ. ನಮಗೆ ನಿಮ್ಮ ಜೊತೆ ಬರಲು ಇಷ್ಟವಿಲ.್ಲ ಎಷ್ಟು ದಿನ ನೀವು ನೀವು ನಮ್ಮನ್ನು ಇಟ್ಟುಕೊಳ್ಳುತ್ತೀರಿ? ನಾನು ಪ್ರಶ್ನಿಸಿದೆ.
``ಸುಮಾರು ಎರಡು ವರ್ಷಗಳ ಕಾಲ ನೀವು ನಮ್ಮ ಗ್ರಹದಲ್ಲಿ ಇರಬೇಕಾಗುವುದು. ಮಾನಸಿಕವಾಗಿ ಸಿದ್ಧರಾಗಿರಿ’’ ಎಂದಿತು ಮತ್ತೊಂದು ಆಕೃತಿ.
“ಎರಡು ವರ್ಷನಾ? ಅಬ್ಬಾ ಸಾಧ್ಯವೇ ಇಲ್ಲ. ನಮ್ಮನ್ನು ಬಿಟ್ಟುಬಿಡಿ” ನಾನು ಕಿರುಚಿದೆ.
ನಾವು ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ ಆ ಅನ್ಯಗ್ರಹ ಜೀವಿಗಳು ನಮ್ಮನ್ನು ಸಮಾಧಾನ ಪಡಿಸಿ, ನಮ್ಮನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದವು. ಭಾಷೆಯೇ ಅರ್ಥವಾಗದ ಸಂಭಾಷಣೆಗೆ ಸ್ಕ್ರೀನ್ಗಳು ನೆರವಾದವು. ಈ ಜೀವಿಗಳ ವಿಚಿತ್ರ ಲೋಕದಲ್ಲಿ ಎರಡು ವರ್ಷ ಕಳೆಯುವುದಾದರೂ ಹೇಗೆ? ಎಂದು ನಮಗೆ ಭಯವಾಗಹತ್ತಿತು. ಆದರೆ ನಾವು ಅಸಹಾಯಕರಾಗಿದ್ದೆವು. ``ಈ ಜೀವಿಗಳಿಗೆ ಅಪಹರಿಸಲು ನಾವೇ ಬೇಕಾಗಿತ್ತಾ?” ಎಂದು ಕೈಕೈ ಹಿಚುಕಿಕೊಂಡೆ.
ಅಷ್ಟರಲ್ಲಿ ನಮ್ಮ ಮುಂದೆ ನೀರು ಮತ್ತು ಹಣ್ಣುಗಳ ಗಾಜಿನ ತಟ್ಟೆ ತಟ್ಟನೇ ಪ್ರತ್ಯಕ್ಷವಾಯಿತು. ನಮ್ಮ ಕೈಗಳಿಗೆ ಬಿಗಿದುಕೊಂಡಿದ್ದ ಖುರ್ಚಿ ಸಡಿಲವಾಯಿತು. ನಾನು ಪಟಕ್ಕನೇ ಮೇಲಕ್ಕೆದ್ದು ನೀರು ಕುಡಿದೆ. ನಮಗೆ ಏನು ಮಾಡಬೇಕು ತಿಳಿಯಲಿಲ್ಲ. ಕಿಟಕಿಯ ಮೂಲಕ ಹೊರಗಡೆಯ ನೀಲಿಯ ಆಕಾಶ ಮಾತ್ರ ಕಾಣುತ್ತಿತ್ತು. ಒಬ್ಬರನ್ನೊಬ್ಬರು ಮುಖ ನೋಡಿಕೊಂಡಿವು. ``ಎರಡು ವರ್ಷ! ಅಬ್ಬಾ, ಸಾಧ್ಯವೇ ಇಲ್ಲ’’ ಎಂದೆ ನಾನು. ``ಅನಿವಾರ್ಯ ಸವಿ. ಕಳೆಯಲೇ ಬೇಕು. ಈಗ ಏನೂ ಮಾಡೋಕೆ ಆಗಲ್ಲ. ನಾವು ಅಸಹಾಯಕರು.’’ ಎಂದ ರಾಜ್ ತನ್ನ ಜೇಬಿನಲ್ಲಿದ್ದ ಮೊಬೈಲ್ ಹೊರ ತೆಗೆದ ಅದರಲ್ಲಿ ಏನೂ ಡಿಸ್ಪ್ಲೆ ಆಗುತ್ತಿರಲ್ಲಿಲ್ಲ. ನನ್ನ ಕಣ್ಣಲ್ಲಿ ನೀರು ತುಂಬಿ ಬಂದಿತು. ಆದರೂ ಧೈರ್ಯ ತಂದುಕೊಂಡು ಒಬ್ಬರನ್ನೊಬ್ಬರು ಸಮಾಧಾನ ಪಡಿಸಿಕೊಂಡೆವು.
ಕೆಲವು ಕ್ಷಣಗಳ ನಂತರ ಹಾರುವ ತಟ್ಟೆ ನಿಂತಂತಹ ಅನುಭವವಾಯಿತು. ಬಾಗಿಲು ತೆರೆದುಕೊಂಡಿತು. ಹೊರಗೆ ಶುಭ್ರ ವಾತಾವರಣ. ಗಾಜಿನ ಚಿತ್ರ ವಿಚಿತ್ರ ಮರಗಳು. ಕಟ್ಟಡಗಳೂ ಕೂಡ ಗಾಜಿನವುಗಳೇ! ಜೀವಿಗಳ ಓಡಾಟ ಅತೀ ವಿರಳ. ಹೊರಗೆ ಮತ್ತೆರಡು ಜೀವಿಗಳು ನಮ್ಮನ್ನು ಕೈಹಿಡಿದು ಸ್ವಾಗತಿಸಿದವು.
ಅವುಗಳನ್ನು ಮುಟ್ಟಲು, ಕೈಕುಲಕಲು ನನಗೆ ಭಯವಾಯಿತು. ನನ್ನ ಭಾರವಾದ ಮನಸ್ಸಿಗೆ ದಿಕ್ಕೇ ತೋಚದಂತಾಗಿತು.್ತ ಕೆಳಗೆ ಇಳಿದೆವು. ಒಂದು ಪುಟ್ಟ ವಿಮಾನದಂತಹ ವಾಹನ ನಮ್ಮ ಮುಂದೆ ನಿಂತುಕೊಂಡಿತು. ಸರ್ರನೇ ಅದರ ಕಿಡಿಕಿಗಳು ತೆರೆದುಕೊಂಡವು. ಒಂದು ಜೀವಿ ``ಕೀಟ್... ಕೀಟ್...’’ ಎಂದಿತು. ಆದರೆ ಅವುಗಳ ಮಾತು ನಮಗೆ ಅರ್ಥವಾಗುತ್ತಿರಲಿಲ್ಲ. ಅವು ತಮ್ಮ ಭಾಷೆಯಲ್ಲಿ ಸಂಭಾಷಿಸುತ್ತಿದ್ದವು. ನಮ್ಮನ್ನು ಆ ವಾಹನದಲ್ಲಿ ಕರೆದುಕೊಂಡು ಹೊರಡಲಾಯಿತು. ಎಲ್ಲವೂ ರಿಮೋಟ್ಮಯ, ಗಾಜಿನ, ನೀಲಿ ಬಣ್ಣದ, ಸೆನ್ಸಾರಮಯ ಜಗತ್ತು!
ನಾವು ಒಂದು ದೊಡ್ಡ ಗಾಜಿನ ಕಟ್ಟಡವನ್ನು ಪ್ರವೇಶಿಸಿದೆವು. ಬರುವಾಗ ರಸ್ತೆಯ ಅಕ್ಕಪಕ್ಕ ದೊಡ್ಡ ಜೀವಿಗಳ್ಯಾವೂ ಕಾಣಲಿಲ್ಲ. ಅಲ್ಲೊಂದು ಇಲ್ಲೊಂದು ವಿಚಿತ್ರ ಮರಗಳು, ಹೂಗಳು, ವಿಚಿತ್ರ ಪ್ರಾಣಿ ಪಕ್ಷಿಗಳನ್ನು ನೋಡಿದೆವು. ಕಟ್ಟಡದ ಒಳಗೆ ಪ್ರವೇಶಿಸಿದ ನಮ್ಮನ್ನು ಮತ್ತೆ ಕುರ್ಚಿಗಳ ಮೇಲೆ ಕುಳ್ಳಿರಿಸಲಾಯಿತು. ಅವುಗಳ ಮುಂದೆ ಮಾನಿಟರ್ಗಳು ತೆರೆದುಕೊಂಡವು. ನಂತರ ಒಂದು ಜೀವಿ ಮಾತನಾಡಲು ಪ್ರಾರಂಭಿಸಿತು. ಅದರ ಮಾತುಗಳು ನಮಗೆ ಕನ್ನಡ ಅಕ್ಷರಗಳಲ್ಲಿ ಮಾನಿಟರ್ಗಳ ಮೇಲೆ ಗೋಚರಿಸುತ್ತಿತ್ತು. ನನಗೆ ಈ ಜೀವಿಗಳು ತಂತ್ರಜ್ಞಾನದಲ್ಲಿ ಎಷ್ಟೊಂದು ಮುಂದುವರಿದಿವೆ ಅಂದೆನಿಸಿತು.
``ನಾನು ಜಿಲ್. ನನ್ನ ಮಂದಿರುವ ಈತ ಜಿಕ್. ನಾವು ಈ ಗ್ರಹದ ವೈದ್ಯರು. ನಾವು ಒಂದು ಬಾರಿ ಭೂಗ್ರಹಕ್ಕೆ ಬಂದಾಗ ಅಲ್ಲಿನ ಜೀವಿಗಳನ್ನು ಕಂಡು ಆಶ್ಚರ್ಯವಾಗಿತ್ತು’’
“ನಮಗೆ ನಿಮ್ಮನ್ನು ಕಂಡು ಆಶ್ಚರ್ಯವಾಗಿದೆ. ನಿಮ್ಮ ತಂತ್ರಜ್ಞಾನ ಅತ್ಯದ್ಭುತ. ನಿಮಗೆ ನಮ್ಮಿಂದೇನಾಗಬೇಕಿದೆ ಎಂಬುದು ತಿಳಿಯುತ್ತಿಲ್ಲ?’’ ಎಂದ ರಾಜ್.
``ನೋಡಿ ಭೂಗ್ರಹದ ಜೀವಿಗಳಿಗೆಲ್ಲ ಎರಡೆರಡು ಕಣ್ಣುಗಳು. ಆದರೆ ನಮಗೆ ಒಂದೇ ಒಂದು ಕಣ್ಣು. ಅದೂ ತಲೆಯ ಹಿಂಭಾಗದಲ್ಲಿ. ಭೂಮಿಯ ಮೇಲಿನ ಮಾನವರು ಬಹಳ ಸುಂದರವಾಗಿ ಕಾಣುವುದು ಈ ಕಣ್ಣುಗಳಿಂದ. ನೀವು ಇತ್ತೀಚೆಗೆ ಮದುವೆಯದವರು. ನೀವು ನಮ್ಮ ಗ್ರಹದಲ್ಲಿ ಸಂಸಾರ ನಡೆಸಿದರೆ ಹುಟ್ಟುವ ಮಗು ಹೇಗಿರಬಹುದು ಎಂದು ಅನ್ವೇಷಿಸುವ ಕುತೂಹಲ ನಮ್ಮದು.’’ ಎಂದಿತು ಜಿಕ್.
``ನಿಮ್ಮ ಗ್ರಹದಲ್ಲಿ ಸಂಸಾರ ನಡೆಸಲು ನಿಮಗೆ ನಾವೇ ಬೇಕಾಗಿತ್ತಾ?’’ ಎಂದು ನನ್ನ ಪ್ರಶ್ನೆಯಾಗಿತ್ತು. ನನಗೆ ಕೋಪವಿನ್ನೂ ತಣ್ಣಗಾಗಿರಲಿಲ್ಲ.
``ನೋಡಿ ಮತ್ತೆ ಮತ್ತೆ ನೀವು ಕೋಪಗೊಳ್ಳಬೇಡಿ. ನಾವು ಮೊದಲೇ ನಮ್ಮ ಉದ್ದೇಶ ಹೇಳಿದ್ದೇವೆ. ಎರಡು ವರ್ಷಗಳ ನಂತರ ನಿಮ್ಮನ್ನು ವಾಪಸ್ಸು ನಿಮ್ಮ ಗ್ರಹಕ್ಕೆ ಕಳಿಸಿ ಕೊಡುವ ಜವಾಬ್ದಾರಿ ನಮ್ಮದು. ನೀವು ಇಲ್ಲಿ ಇರುವಷ್ಟು ದಿವಸ ಸಂತೋಷದಿಂದ ಇರಬೇಕು.’’ ಎಂದಿತು ಜಿಲ್.
``ನೀವು ಈ ಮನೆಯಲ್ಲಿ ಹಾಯಾಗಿ ಇರಬಹುದು. ನಿಮಗೆ ಏನಾದರೂ ಸಹಾಯ ಬೇಕಾದರೆ ಈ ಬಟನ್ ಒತ್ತಿ. ನಿಮಗೆ ಹೊರಗಡೆ ಓಡಾಡಲು ಒಂದು ವಾಹನದ ವ್ಯವಸ್ಥೆ ಇದೆ. ಡೈವರ್ ಇರುವುದಿಲ್ಲ. ನೀವೇ ಚಲಾಯಿಸಬೇಕು. ಎಂದಿತು ಜಿಕ್.
ಒಲ್ಲದ ಮನಸ್ಸಿನಿಂದ ಇಬ್ಬರೂ ತಲೆಯಾಡಿಸಿದೆವು. ಎರಡು ವರ್ಷ ಈ ಗ್ರಹದಲ್ಲಿ ಸಂಸಾರ ನಡೆಸುವುದು ನಮ್ಮ ಹಣೆಬರಹದಲ್ಲಿ ಬರೆದಾಗಿತ್ತು. ಹೌದು, ನಮಗೆ ಇತ್ತೀಚೆಗೆ ಮದುವೆಯಾಗಿತ್ತು. ನನಗೆ ಹಿಂದಿನ ನೆನಪುಗಳ ಸುಳಿ ತೆರೆದುಕೊಳ್ಳಹತ್ತಿತು.
ಭಾಗ 2
(ಸೋನಿಕ್ಸ್ ಗ್ರಹದ ಜೀವಿಗಳಾದ ಜಾಕ್ ಮತ್ತು ಜಿಲ್ಲ್ ನಿರ್ದೇಶನದಂತೆ ಹೊಸದಾಗಿ ಮದುವೆಯಾಗಿದ್ದ ರಾಜ್ ಮತ್ತು ಸವಿಯನ್ನು ಭೂಮಿಯಿಂದ ಅಪಹರಿಸಲಾಗಿತ್ತು. ಎರಡು ವರ್ಷ ಅದೇ ಗ್ರಹದಲ್ಲಿ ಇರಲು ರಾಜ್ ಮತ್ತು ಸವಿ ಒಪ್ಪಿಕೊಳ್ಳುತ್ತಾರೆ. ಎಲ್ಲವೂ ರಿಮೋಟ್ಮಯ, ಗಾಜಿನ, ನೀಲಿ ಬಣ್ಣದ, ಸೆನ್ಸಾರಮಯ ಜಗತ್ತು!....ಮುಂದೆ ಓದಿ)
ವಿಜ್ಞಾನ ಕಾಲೇಜಿನ ಪ್ರೋಫೆಸರ್ ಆಗಿದ್ದ ರಾಜ್ ಸಸ್ಯಶಾಸ್ತ್ರವನ್ನು ಬೋಧಿಸುತ್ತಿದ್ದರು. ನಾನು ಸಂಗೀತ ಶಿಕ್ಷಕಿ. ಅನಾಥಳಾಗಿದ್ದ ನನ್ನನ್ನು ರಾಜ್ ಸಂಭ್ರಮದಿಂದ ಮದುವೆ ಮಾಡಿಕೊಂಡಿದ್ದರು. ಆ ದಿನ ರವಿವಾರ. ಪಿಕನಿಕ್ ಎಂದು ಮೈಸೂರಿನಿಂದ ಊಟಿಗೆ ಹೊರಟ ದಾರಿಯಲ್ಲಿ ನಮ್ಮ ಅಪಹರಣವಾಗಿತ್ತು.
``ಸವಿ ಹೆದರಬೇಡ, ಇದೊಂದು ಅವಕಾಶವೆಂದು ಭಾವಿಸು. ಊಟಿಗೆ ಹೋಗಬೇಕಾದವರು ಅದಕ್ಕಿಂತ ಸುಂದರವಾದ ಈ ಗ್ರಹಕ್ಕೆ ಬಂದಿದ್ದೇವೆ. ನಮ್ಮನ್ನು ವಾಪಸ್ಸು ಕಳಿಸಿ ಕೊಡುವ ಜವಾಬ್ದಾರಿಯನ್ನು ಈ ಜೀವಿಗಳು ಒಪ್ಪಿಕೊಂಡಿವೆ. ನೀನೇನೂ ಹೆದರಬೇಡ. ಇರುವಷ್ಟು ದಿನ ಇಲ್ಲಿ ಎಂಜಾಯ್ ಮಾಡೋಣ.’’ ಎಂದ ರಾಜ್.
ನಾನು ಅದಕ್ಕೆ ಒಪ್ಪಿಕೊಂಡೆ. ಆದರೆ ಇಲ್ಲಿ ಎರಡು ವರ್ಷ ಕಾಲ ಕಳೆಯುವುದಾದರೂ ಹೇಗೆ? ಎಂಬುದು ನನ್ನ ಪ್ರಶ್ನೆಯಾಗಿತ್ತು. ಅದಕ್ಕೆ ಜಿಲ್ ನಮಗೊಂದು ಉಪಾಯ ನೀಡಿದ್ದ.
ರಾಜ್ ಈ ಗ್ರಹದಲ್ಲಿಯೂ ಕಾಲೇಜಿನ ಶಿಕ್ಷಕನಾಗಿ ಭೂಗ್ರಹದ ಸಸ್ಯಗಳ ಬಗ್ಗೆ ಬೋಧಿಸಲು, ಸವಿ ಸಂಗೀತ ಶಿಕ್ಷಕಿಯಾಗಿ ಈ ಗ್ರಹದ ಜೀವಿಗಳಿಗೆ ಸಂಗೀತ ಬೋಧಿಸಲು ಅಪೌಯಿಂಟ್ ಮಾಡಿಕೊಳ್ಳುವುದಾಗಿ ಹೇಳಿದ. ನಾವು ಅದಕ್ಕೆ ಒಪ್ಪಿಕೊಂಡೆವು. ಜಿಲ್ ರಿಮೋಟ್ ಒತ್ತಿದ. ನಮ್ಮ ಮುಂದೆ ಚಿತ್ರವಿಚಿತ್ರ ತಿಂಡಿ ತಿನಿಸು, ನೀಲಬಣ್ಣದ ಕುಡಿಯುವ ನೀರು ಪ್ರತ್ಯಕ್ಷವಾಯಿತು. ಹೊಟ್ಟೆ ಹಸಿದಿತ್ತಾದರೂ ಎಲ್ಲ ಸಪ್ಪೆ ಸಪ್ಪೆ. ಉಪ್ಪು, ಹುಳಿ, ಖಾರ ಏನೂ ಇರಲಿಲ್ಲ. ಆದರೆ ಹಣ್ಣುಗಳು ರುಚಿಯಾಗಿದ್ದವು. ನಾನು ಹಣ್ಣುಗಳನ್ನು ಮಾತ್ರ ಸೇವಿಸಿದೆ.
ಹಸಿವಿದ್ದಷ್ಟು ತಿಂದು ನಮಗಾಗಿ ಹೊರಗೆ ನಿಲ್ಲಿಸಿದ್ದ ಕಾರಿನಂತಹ ವಾಹನ ಏರಿ ಸುತ್ತಾಡಲು ಹೊರಟೆವು. ಅತ್ಯಾಧುನಿಕ ವಾಹನದ ಗಾಲಿಗಳು ಅಷ್ಟಾಕೃತಿಯಲ್ಲಿದ್ದವು. ವಾಹನ ಚಲಿಸಲು ಟ್ರ್ಯಾಕ್ ಇತ್ತು. ನನಗೆ ಎಲ್ಲವೂ ಚಿತ್ರ ವಿಚಿತ್ರವಾಗಿ ತೋರುತ್ತಿತ್ತು. ಒಮ್ಮೊಮ್ಮ ನಮ್ಮ ಊರು ನೆನೆದು ಭಯವೂ ಆಗುತ್ತಿತ್ತು. ಭಯವಾದಾಗಲೆಲ್ಲಾ ರಾಜ್ ಧೈರ್ಯ ತುಂಬುತ್ತಿದ್ದ. ಒಟ್ಟಿನಲ್ಲಿ ನಾವು ಇಬ್ಬರೂ ಎರಡು ವರ್ಷ ಆ ಗ್ರಹದಲ್ಲಿ ಇರಲು ಮಾನಸಿಕವಾಗಿ ನಿರ್ಧರಿಸಿದ್ದೆವು.
ರಾಜ್ ಡ್ರೈವರ್ ಸೀಟ್ ಮೇಲೆ ಕೂತ ತಕ್ಷಣ ವಾಹನ ಚಲಿಸಲು ಪ್ರಾರಂಭಿಸಿತು. ನಮ್ಮ ವಾಹನ ಮುಂದೆ ಹೋದಂತೆ ನಮಗೆ ಚಿತ್ರ ವಿಚಿತ್ರಾಕಾರದ ವಾಹನಗಳು ಗೋಚರಿಸುತ್ತಿದ್ದವು. ಅಲ್ಲಿ ನೆಲದ ಮೇಲಿನ ವಾಹನಗಳಿಂತ ಆಕಾಶದಲ್ಲಿ ಹಾರಾಡುವ ವಾಹನಗಳೇ ಹೆಚ್ಚಿದ್ದವು. ವಿಶೇಷ ಅಂದ್ರೆ ಆ ವಾಹನದಲ್ಲಿ ರಾಜ್ ಕುಳಿತ ಡ್ರೈವರ್ ಸೀಟಿನಲ್ಲಿ ಸ್ಟೇರಿಂಗ್ ಇರಲೇ ಇಲ್ಲ. ಕೇವಲ ಸ್ಕ್ರೀನ್ ಮೇಲೆ ರಸ್ತೆ ಚಿತ್ರ. ಟಚ್ ಮಾಡುತ್ತಾ ಹೋದಂತೆ ವಾಹನ ವೇಗವಾಗಿ ಮುಂದೆ ಮುಂದೆ ಚಲಿಸುತ್ತಿತ್ತು. ಅಪರೂಪಕ್ಕೊಮ್ಮೆ ಎದುರಿನಿಂದ ವಾಹನಗಳು ಬೇರೆ ಬೇರೆ ಟ್ರ್ಯಾಕ್ನಲ್ಲಿ ಬರುತ್ತಿದ್ದವು.
ಅಷ್ಟರಲ್ಲಿ ಸ್ಕ್ರೀನ್ನಲ್ಲಿ ಮುಂದೆ ನೀರಿರುವ ಸೂಚನೆ ದೊರೆಯಿತು. ರಾಜ್ಗೆ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಗೊತ್ತಾಗಲಿಲ್ಲ. ಆಗ ನಮ್ಮ ವಾಹನ ನೋಡ ನೋಡುತ್ತಿದ್ದಂತೆ ನೀರು ಪ್ರವೇಶಿಸಿಯೇ ಬಿಟ್ಟಿತು. ನಮ್ಮ ವಾಹನ ಬೋಟ್ ರೂಪಕ್ಕೆ ಪರಿವರ್ತನೆಯಾಗಿತ್ತು. ನನಗೆ ಆಶ್ಚರ್ಯವೋ ಆಶ್ಚರ್ಯ. ಸುಮಾರು 4-5 ಕಿ.ಮೀ ಕ್ರಮಿಸಿದ ಮೇಲೆ ಮತ್ತೆ ರಸ್ತೆ. ನಾವಿದ್ದ ವಾಹನದ ಸ್ವರೂಪವೂ ಮೊದಲಿನ ರೀತಿಯಾಯಿತು.
``ಈ ಗ್ರಹ ವಿಷ್ಟೊಂದು ವಿಚಿತ್ರವಾಗಿದೆಯೆಲ್ಲಾ? ಶುಭ್ರ ಆಕಾಶ. ಕಡು ನೀಲಿ ಬಣ್ಣದ ನೀರು. ತ್ರಿಕೋನಾಕಾರದ ಗಾಜಿನ ಮರಗಿಡಗಳು. ಹಳದಿ ಬಣ್ಣದ ಹಣ್ಣುಗಳು, ತುಂಬಾ ಮಜವಾಗಿದೆಯಲ್ಲಾ?” ನನ್ನ ಪ್ರಶ್ನೆ.
``ಹೌದು ಸವಿ. ಇಲ್ಲಿನ ಕಟ್ಟಡಗಳು ಗಾಜಿನಿಂದ ಮಾಡಲ್ಪಟ್ಟಿವೆ. ಪ್ರಾಣಿ ಪಕ್ಷಿಗಳೂ ವಿಚಿತ್ರವಾಗಿವೆ. ಒಂದೇ ಕಣ್ಣಿನ ಪ್ರಾಣಿಗಳು, ಪಕ್ಷಿಗಳು.” ಎಂದ ರಾಜ್
ಅಷ್ಟರಲ್ಲಿ ಸ್ಕ್ರೀನ್ ಮೇಲೆ ಮತ್ತೆ ದೊಡ್ಡ ಕಂದಕವಿರುವ ಸೂಚನೆ ದೊರೆಯಿತು. ನಮ್ಮ ವಾಹನದ ರೆಕ್ಕೆ ಬಿಟ್ಟಿಕೊಳ್ಳುತ್ತಾ ಅದು ಪುಟ್ಟ ವಿಮಾನವಾಗಿ ಮಾರ್ಪಟ್ಟಿತು. ಅದೊಂದು ತೆರೆದ ವಿಮಾನವಾಗಿ ಬದಲಾಯಿತು. ಅದಕ್ಕೆ ಗಾಜಿನ ಕವಚವಿತ್ತು. ಕೆಳಗಡೆಯ ಹಾಸು ಕೂಡ ಗಾಜಿನದ್ದೇ. ಕೆಳಗಿನ ನೆಲವನ್ನು ನೋಡುವ ಅವಕಾಶ ನಮ್ಮದಾಗಿತ್ತು. ನಮಗೆ ಭಯದ ಜೊತೆ ಜೊತೆಗೆ ಆಶ್ಚರ್ಯವೂ ಉಂಟಾಗಿತ್ತು.
ಮುಂದೆ ಮತ್ತೆ ಸಮತಟ್ಟಾದ ಪ್ರದೇಶ. ``ರಾಜ್ ವಾಹನ ನಿಲ್ಲಿಸು’’ ಎಂದೆ. ರಾಜ್ ವಾಹನವನ್ನು ನಿಲ್ಲಿಸಿದ. ಸುಂದರ ಪರಿಸರದಲ್ಲಿ ಕೆಲ ಹೊತ್ತು ಕಾಲ ಕಳೆದೆವು. ಅಲ್ಲಿಯ ಸೂರ್ಯ ನೀಲಿ ಬಣ್ಣದ್ದಾಗಿತ್ತು. ಅದು ಅಸ್ತವಾಗುತ್ತಿರುವ ಅನುಭವ. ಮತ್ತೊಂದು ದಿಕ್ಕಿನಲ್ಲಿ 4 ಚಂದ್ರಗಳು ಸಾಲುಸಾಲಾಗಿ ಮೆರವಣಿಗೆ ಹೊರಟ ರೂಪದಲ್ಲಿ ಮೂಡಿ ಬಂದವು ``ಭೂಮಿಯ ಮೇಲೆ ನಾವು ಒಂದು ಚಂದ್ರನನ್ನು ನೋಡಿದರೆ ಈ ಗ್ರಹಕ್ಕೆ ನಾಲ್ಕು ಚಂದ್ರಗಳಾ? ನನ್ನ ಪ್ರಶ್ನೆ
``ಈ ಸೋನಿಕ್ಸ್ ಗ್ರಹಕ್ಕೆ ಆರು ಚಂದ್ರಗಳಿವೆ ಎಂದು ನಾನು ಓದಿದ್ದೇನೆ. ಇದು ನೀಲಿ ಗ್ರಹ. ಈಗ ನಮಗೆ ನಾಲ್ಕು ಚಂದ್ರಗಳ ದರ್ಶನವಾದರೆ ಇನ್ನೆರಡು ಚಂದ್ರಗಳು ಈ ಗ್ರಹದ ಇನ್ನೊಂದು ಭಾಗದಲ್ಲಿವೆ’’ ಎಂದ ರಾಜ್.
ಅಷ್ಟರಲ್ಲಿ ಕತ್ತಲಾಗಿತ್ತು. ಅಲ್ಲಿಗೆ ವೈದ್ಯರಾದ ಜೆಕ್ ಮತ್ತು ಜಿಲ್ ಬಂದಿದ್ದರು. ಅವರಿಗೆ ನಮ್ಮ ಇರಿವು ತಿಳಿಯುವ ಹಾಗೆ ನಮ್ಮ ಕೈ ಬೆರಳಿಗೆ ಉಂಗುರ ಹಾಕಲಾಗಿತ್ತು. ಅವರು ತಮ್ಮ ವಾಹನದಲ್ಲಿ ನಮ್ಮನ್ನು ಕುಳ್ಳಿರಿಸಿಕೊಂಡು ಮನೆಗೆ ಕರೆದುಕೊಂಡು ಹೋದರು. ಒಂದೇ ದಿನದಲ್ಲಿ ಜೆಕ್ ಮತ್ತು ಜಿಲ್ ನಮಗೆ ಸ್ನೇಹಿತರಾಗಿದ್ದರು. ಮಾರನೇ ದಿನ ಈ ಗ್ರಹದ ಕಾಲೇಜಿನ ಮಕ್ಕಳು ಹೇಗಿರುತ್ತಾರೆ ಎಂದು ತಿಳಿಯುವ ಕುತೂಹಲ ನನ್ನಗಾಗಿತ್ತು. ಮನೆಗೆ ಹೋದ ಮೇಲೆ ಚಿತ್ರ ವಿಚಿತ್ರ ಖಾದ್ಯಗಳು ನಮ್ಮ ಮುಂದೆ ಪ್ರತ್ಯಕ್ಷವಾದವು. ತುಂಬಾ ಹಸಿವೆಯಾಗಿತ್ತು. ಇಬ್ಬರೂ ಗಡಬಡಾಯಿಸಿ ಊಟ ಮಾಡಿದೆವು. ನನಗೆ ಆ ನೀಲಿ ನೀರು ಮತ್ತು ಹಣ್ಣುಗಳು ತುಂಬಾ ಇಷ್ಟವಾದವು.
ಬೆಳಿಗ್ಗೆ ಎದ್ದು ಎಲ್ಲ ಕ್ರಿಯಾಕರ್ಮಗಳನ್ನು ಮುಗಿಸಿ ಕಾಲೇಜಿಗೆ ಹೊರಟೆವು. ಅಲ್ಲಿ ಒಂದು ವರ್ಗಕ್ಕೆ ನಾಲ್ಕು ವಿದ್ಯಾರ್ಥಿಗಳು. ಆ ಮಕ್ಕಳು ನೋಡಲು ವಿಚಿತ್ರವಾಗಿದ್ದವು. ಅವರ ತಲೆಯ ಹಿಂದಿನ ಕಣ್ಣನ್ನೂ ನೋಡಿದಾಗ ನನಗೆ ಕನ್ಫ್ಯೂಜ್ ಆಗಿ ನಗು ಬರುತ್ತಿತ್ತು. ನಾನು ಅವರಿಗೆ ಸಂಗೀತಾಭ್ಯಾಸ ಪ್ರಾರಂಭಿಸಿಯೇ ಬಿಟ್ಟೆ. ಸ-ರಿ-ಗ-ಮ-ಪ-ದ-ನಿ-ಸಾ....ಕರ್ಕಶ ಧ್ವನಿಗಳು!
ರಾಜ್ ಮಕ್ಕಳಿಗೆ ಭೂಗ್ರಹದ ಸಸ್ಯ ಸಂಪತ್ತಿನ ಬಗ್ಗೆ ಪಾಠ ಮಾಡುತ್ತಿದ್ದ. ಒಟ್ಟಿನಲ್ಲಿ ಮೂರು ತಿಂಗಳು ಕಳೆದದ್ದು ಗೊತ್ತೆ ಆಗಲಿಲ್ಲ ನಾನು ಗರ್ಭಿಣಿ ಎಂದು ರಾಜ್ ಗೆ ಗೊತ್ತಾದಾಗ ರಾಜ್ ತುಂಬಾ ಕೇರ್ ಮಾಡಹತ್ತಿದ. ವೈದ್ಯರಾದ ಜಿಲ್ ಮತ್ತು ಜಾಕ್ ನನಗೆ ಆಗಾಗ ಅನುಸರಿಸಬೇಕಾದ, ಆಹಾರ ಸೇವಿಸಬೇಕಾದ ಟಿಪ್ಸ್ ಹೇಳಿ ಕೊಡುತ್ತಿದ್ದರು.
ಜಾಕ್ ಮತ್ತು ಜಿಲ್ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿತು. ನನಗೆ 9 ತಿಂಗಳಾಗಿತ್ತು. ನಾನು ಪ್ರಸವವೇದನೆ ಅನುಭವಿಸುತ್ತಿದ್ದೆ. ಒಂದು ಕ್ಷಣ ನನ್ನ ಊರಿನ ನೆನಪಾಗಿತ್ತು. ಜಾಕ್ ಮತ್ತು ಜಿಲ್ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು.
ಆ ದಿನ ನನ್ನನ್ನು ಆಪರೇಶನ್ ಥಿಯೇಟರ್ಗೆ ತೆಗೆದುಕೊಂಡು ಹೋಗಲಾಯಿತು. ರಾಜ್ನನ್ನು ಹೊರಗಡೆ ಕುಳ್ಳಿರಿಸಲಾಗಿತ್ತು. ರಾಜ್ ತುಂಬಾ ಉತ್ಸುಕನಾಗಿದ್ದ. ಅವನಿಗಿಂತ ಹೆಚ್ಚಿನ ಉತ್ಸುಕತೆ ಜಾಕ್ ಮತ್ತು ಜಿಲ್ನದಾಗಿತ್ತು ಭೂಗ್ರಹದ ಮಾನವರ ಮಕ್ಕಳು ಸೋನಿಕ್ಸ್ ಗ್ರಹದ ವಾತಾವರಣದಲ್ಲಿ ಜನಿಸಿದಾಗ ಹೇಗಿರುತ್ತಾರೆ? ಎಂಬುದನ್ನು ಅವರು ಅಧ್ಯಯನ ಮಾಡುತ್ತಿದ್ದರು. ಆ ಕ್ಷಣ ಬಂದೇ ಬಿಟ್ಟಿತು.
ರಾಜ್ನಿಗೆ `ಅಪ್ಪಾ..ಅಪ್ಪಾ’ ಎಂಬ ಧ್ವನಿ ಕೇಳಿಸತೊಡಗಿತು. ಭೂಮಿಯ ಮೇಲಿನ ಮಕ್ಕಳು ‘ಅಮ್ಮ ಅಮ್ಮ’ ಎಂದು ಅತ್ತರೆ, ಈ ಗ್ರಹದಲ್ಲಿ ಜನಿಸಿದ ಮಗು `ಅಪ್ಪಾ ಅಪ್ಪಾ’ ಎನ್ನುತ್ತಿತ್ತು. ರಾಜ್ನಿಗಾದ ಖುಷಿ ಹೇಳತೀರದು. ರಾಜ್ ಒಳಗೆ ಓಡಿ ಬಂದ. ಸವಿಯ ಮುಖದಲ್ಲಿ ನಗುವಿತ್ತು. ಮಗುವನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಅದು ನನ್ನನ್ನು ನೋಡಿ ನಗುತ್ತಿತ್ತು. ಜಾಕ್ ಮತ್ತು ಜಿಲ್ ಆಶ್ಚರ್ಯದಿಂದ ಮಗುವನ್ನು ವೀಕ್ಷಿಸುತ್ತಿದ್ದರು.
ನಿಧಾನವಾಗಿ ರಾಜ್ ಗಾಜಿನ ಪೆಟ್ಟಿಗೆಯಿಂದ ಮಗುವನ್ನು ಎತ್ತಿಕೊಂಡ. ಮಗು ನೋಡಲು ಸವಿಯ ಹಾಗೆಯೇ ಇತ್ತು. ತಲೆಯಲ್ಲಿ ಕೂದಲುಗಳು ಕಡಿಮೆ. ಅದಕ್ಕೆ ಒಂದು ಮುತ್ತು ಕೊಟ್ಟು ತಲೆಯ ಹಿಂಬಾಗಕ್ಕೆ ನೋಡಿದ. ಅಲ್ಲಿಯೂ ಒಂದು ಕಣ್ಣು. ಆದರೆ ಅದು ಮುಚ್ಚಿದ ಸ್ಥಿತಿಯಲ್ಲಿತ್ತು. ಅದಕ್ಕೆ ದಪ್ಪವಾದ ರೆಪ್ಪೆ ಇತ್ತು. ``ಸವಿ, ಈ ಮಗುವಿಗೆ ಮೂರು ಕಣ್ಣುಗಳಿವೆ!” ಎಂದು ರಾಜ್ ಆಶ್ಚರ್ಯದಿಂದ ಹೇಳಿದ.
ನನಗೂ ಆಶ್ಚರ್ಯವಾಗಿತ್ತು. ಭೂಗ್ರಹದ ಜೀವಿಗಳು ಹಾಗೆ ಎರಡು ಕಣ್ಣಿನ ಜೊತೆಗೆ ಈ ಗ್ರಹದ ವಾತಾವರಣದ ಅಂಶ ಸೇರಿ ಮೂರನೇ ಕಣ್ಣು ಸೃಷ್ಟಿಯಾಗಿತ್ತು, ಮಗು ಅಡ್ಡಲಾಗಿ ಮಲಗಿ ಮೂರು ಕಣ್ಣುಗಳಿಂದ ನೋಡುತ್ತಿತ್ತು. ನಾನು ಸ್ವಲ್ಪ ಕಸಿವಿಸಿಯಾದೆ. ರಾಜ್ ನನಗೆ ಸಮಾಧಾನ ಹೇಳಿದ. ``ಸವಿ ನನ್ನ ಈ ಮಗ ಅದೃಷ್ಟವಂತ. ತ್ರಿನೇತ್ರ ನಾವು ಇದನ್ನು ಸೌಭಾಗ್ಯವೆಂದೇ ಭಾವಿಸಬೇಕು.” ಎಂದು ರಾಜ್ ನನ್ನನ್ನು ಸಮಾಧಾನಪಡಿಸಿದ್ದ.
ಕೆಲವು ದಿನಗಳ ನಂತರ ಮಗು ದೊಡ್ಡದಾಗುತ್ತಾ ಬಂದಿತು. ಜಾಕ್ ಮತ್ತು ಜಿಲ್ ಆ ಮಗುವಿನೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಮೇಲಿಂದ ಮೇಲೆ ಅದರ ಕಣ್ಣುಗಳ ದೃಷ್ಟಿ ಪರೀಕ್ಷಿಸುತ್ತಿದ್ದರು. ಅವರು ಹೇಳುವ ಪ್ರಕಾರ ಎರಡು ಕಣ್ಣುಗಳಿಗಿಂತ ಮೂರನೇ ಕಣ್ಣು ಹೆಚ್ಚು ದಿವ್ಯದೃಷ್ಟಿಯನ್ನು ಹೊಂದಿತ್ತು.
ಒಂದು ವರ್ಷ ಕಳೆದು ಹೋಗಿತ್ತು. ಮಗುವಿಗೆ 9 ತಿಂಗಳಾಗಿತ್ತು ನಾವು ಭೂಗ್ರಹಕ್ಕೆ ಹೋಗುವ ಆಶೆಯನ್ನು ಜಾಕ್ ಮತ್ತು ಜಿಲ್ರಲ್ಲಿ ಪ್ರಸ್ತಾಪಿಸಿದ್ದೆವು. ಅವರೂ ತಮ್ಮ ಪ್ರಯೋಗಗಳನ್ನೂ ಮುಗಿಸಿದ್ದರು. ಫಲಿತಾಂಶದ ರೂಪದಲ್ಲಿ ತ್ರೀನೇತ್ರನನ್ನು ಕಂಡಿದ್ದರು.
ಆ ದಿನ ಬಂದೆ ಬಿಟ್ಟಿತು. ನಾವು ಹಾರುವ ತಟ್ಟೆಯಲ್ಲಿ ಕೂತು ಭೂಮಿಗೆ ಹೊರಡುವ ದಿನ. ಜಾಕ್ ಮತ್ತು ಜಿಲ್ ನಮ್ಮನ್ನೂ ಪ್ರೀತಿಪೂರ್ವಕವಾಗಿ ಬೀಳ್ಕೊಟ್ಟರು. ಅವರಿಗೆ ನಮ್ಮನ್ನು ಕಳುಹಿಸುವ ಮನಸ್ಸೇ ಇರಲಿಲ್ಲ. ಆದರೂ ಅಗಲಿಕೆ ಅನಿವಾರ್ಯವಾಗಿತ್ತು. ನಾವು ಹಾರುವ ತಟ್ಟೆಯಲ್ಲಿ ಕುಳಿತುಕೊಂಡೆವು. ತ್ರಿನೇತ್ರ ನಿದ್ರೆಗೆ ಜಾರಿದ್ದ. ನಮ್ಮ ಜೊತೆ ಬರುವಗ ಇದ್ದ ಎರಡು ಜೀವಿಗಳನ್ನು ಕಳುಹಿಸಿ ಕೊಡಲಾಯಿತು. ತಟ್ಟೆ ಗ್ರಹದಿಂದ ಮೇಲೆ ಹಾರಿತು. ಕಿಟಕಿಯ ಮೂಲಕ ಜಾಕ್ ಮತ್ತು ಜಿಲ್ಲ್ ಗೆ ಬಾಯ್ ಹೇಳಿದ್ದೆವು. ಸ್ವಲ್ಪ ಹೊತ್ತಿನಲ್ಲಿ ನಾವೂ ನಿದ್ರೆಗೆ ಜಾರಿದೆವು.
ಕಣ್ಣು ತೆರೆದಾಗ ಸೂರ್ಯಾಸ್ತವಾದಂತಹ ಅನುಭವ. ಹಾರುವ ತಟ್ಟೆ ನಿಂತ ಅನುಭವ. ಹಾರುವ ತಟ್ಟೆಯಂದ ಹೊರ ಬಂದು ನೋಡಿದಾಗ ನಾನು ತ್ರೀನೇತ್ರನನ್ನು ಎಚ್ಚರಿಸಿ ಅವನಿಗೆ ಭೂಮಿಯ ಚಂದಮಾಮಾ ತೋರಿಸಿದ್ದೆ.
No comments:
Post a Comment