Sunday, 29 March 2020

ಕಾಲದೊಂದಿಗೆ ಬದಲಾದ ಶಿಕ್ಷಕರ ಅಸ್ಮಿತೆ


ಕಾಲದೊಂದಿಗೆ ಬದಲಾದ ಶಿಕ್ಷಕರ ಅಸ್ಮಿತೆ

ಲೇಖನ-ಡಾ.ಲಿಂಗರಾಜ ರಾಮಾಪೂರ

ಸರಕಾರಿ ಪ್ರೌಢಶಾಲೆ, ಕಿರೇಸೂರ. ತಾ.ಹುಬ್ಬಳ್ಳಿ

 

 

 

ನೆನಪು-1 ಇದು 17 ವರ್ಷದ ಹಿಂದಿನ ನೆನಪು. ಹುಬ್ಬಳ್ಳಿ ತಾಲೂಕಿನ ಪುಟ್ಟ ಗ್ರಾಮ ಹಳ್ಳಿಯಾಳ. ಆಗ ನಗರದ ಸಂಪರ್ಕದಿಂದ ತುಸು ದೂರವೇ ಇತ್ತು. ನಾನು ಅದೇ ತಾನೆ ಸೇವೆಗೆ ಸೇರಿದ್ದೆ. ಬಸ್ಸಿನಿಂದ ಇಳಿದ ತಕ್ಷಣ ಮಕ್ಕಳು ಓಡಿಬಂದು ಮುತ್ತಿಕೊಳ್ಳುತ್ತಿದ್ದರು. ನಮ್ಮ ಬ್ಯಾಗ್, ಪುಸ್ತಕಗಳು ಎಲ್ಲವನ್ನೂ ಹಿಡಿದುಕೊಳ್ಳುತ್ತಿದ್ದರು. ಅವರಿಗೆ ಖುಷಿಯೋ ಖುಷಿ. ಅಲ್ಲಿಂದ ಶಾಲೆಗೆ ಬರುವಷ್ಟರಲ್ಲಿ ದಾರಿಯಲ್ಲಿ ಭೇಟಿಯಾಗುತ್ತಿದ್ದ 50ಕ್ಕೂ ಹೆಚ್ಚು ಪಾಲಕ ಪೋಷಕರಿಂದ ನಮಸ್ಕಾರಗಳ ಸುರಿಮಳೆ.

ಶಾಲೆಗೆ ಹೋಗುವಷ್ಟರಲ್ಲಿ ಊರವರು ಯಾರಾದರೂ ಕುಡಿಯಲು ಮಜ್ಜಿಗೆ, ಹಾಲು, ಪಾನಕ ತಂದಿರುತ್ತಿದ್ದರು. ನಾನು ಊರಲ್ಲಿ ಸೇವೆ ಮಾಡಿದ ಮೂರುವರೆ ವರ್ಷ ಮದ್ಯಾಹ್ನದ ಊಟ ಪಾಲಕರ ಮನೆಗಳಿಂದಲೇ ಪೂರೈಕೆಯಾಗುತ್ತಿತ್ತು. ನನಗೆ ನನ್ನದೇ ಊರು ಎಂಬ ಅನುಭವ. ನಾನೂ ವೃತ್ತಿಯನ್ನು ತುಂಬಾ ಹಚ್ಚಿಕೊಂಡಿದ್ದೆ. ಮಕ್ಕಳಿಗೆ ಪ್ರೀತಿಯಿಂದ ಕಲಿಸುತ್ತಿದ್ದೆ. ಅವರಿಗೆ ಹಾಡು, ನಾಟಕ, ಕಲೆ ಹೀಗೆ ಎಲ್ಲವನ್ನೂ ಕಲಿಯುವ ಅವಕಾಶಗಳನ್ನು ಒದಗಿಸಿದ್ದೆ. ನನಗೆ ಸಮಯ ಕಳೆದುದರ ಅರಿವೆಯೇ ಇರುತ್ತಿರಲಿಲ್ಲ. ಕೆಲವು ಬಾರಿ ಸಂಜೆ ಏಳೆಂಟು ಗಂಟೆಯಾಗುವವರೆಗೂ ನಾನು ಊರಲ್ಲಿ ಇರುತ್ತಿದ್ದೆ. ಊರಲ್ಲಿ ಏನೇ ಕಾರ್ಯಕ್ರಮಗಳಿರಲಿ ಅಲ್ಲಿ ಶಿಕ್ಷಕರದ್ದೇ ಸಾರಥ್ಯ. ಮದುವೆ, ಮುಂಜವಿ ಇರಲಿ, ಸೀಮಂತವಿರಲಿ ಶಿಕ್ಷಕರನ್ನು ಆಹ್ವಾನಿಸುವ ಪರಿಪಾಠ. ಶಿಕ್ಷಕರೆಂದರೆ ಅಷ್ಟು ಗೌರವ. ರಾಜಕಾರಣಿಗಳಿಂದ ಹಿಡಿದು ಊರಿನ ಪ್ರತಿಯೊಬ್ಬರೂ ಶಿಕ್ಷಕರಿಗೆ ನಮಸ್ಕರಿಸುವ ಹಾಗೂ ಗೌರವಿಸುವ ಪರಿಪಾಠ.

ನೆನಪು-2 ಇದು ಹತ್ತು ವರ್ಷದ ಹಿಂದಿನ ನೆನಪು. ನಾನು ಹಳ್ಳಿಯಾಳದಿಂದ ಹುಬ್ಬಳ್ಳಿ ಶಹರದ ಭೈರಿದೇವರಕೊಪ್ಪಕ್ಕೆ ವರ್ಗಾವಣೆಗೊಂಡಿದ್ದೆ. ನನ್ನಲ್ಲಿ ಈಗ ಕಲಿಕೆಯ ವಾತಾವರಣ ಸೃಷ್ಟಿಸುವ ಕೌಶಲ್ಯಗಳು ಗಟ್ಟಿಗೊಂಡಿದ್ದವು. ಮಕ್ಕಳ ಮಾನಸಿಕ ಸ್ಥಿತಿಗತಿಗಳನ್ನು ಚೆನ್ನಾಗಿ ಅರಿತಿದ್ದೆ. ಹಾಗೆ ಪಾಲಕರದ್ದೂ ಕೂಡ. ಆದರೆ ನನಗೆ ಶಾಲೆಯಲ್ಲಿ ಹೊಂದಿಕೊಳ್ಳಲು ಮೂರು ವರ್ಷವೇ ಬೇಕಾಯಿತು. ಪಾಲಕರ, ಮಕ್ಕಳ ಹಾಗೂ ಸಹಶಿಕ್ಷಕರ ವಿಶ್ವಾಸ ಗಳಿಸಲು ಹಲವು ವರ್ಷಗಳೇ ಕಳೆಯಿತು. ಏಕೆಂದರೆ ಮೇಲಿನ ಗ್ರಾಮೀಣ ಶಾಲೆಯ ಪರಿಸ್ಥಿತಿಗೂ ಹಾಗೂ ಶಹರ ಪ್ರದೇಶದ ಶಾಲೆಯ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸ. ಶಾಲಾ ನಾಯಕತ್ವ ವಹಿಸಿಕೊಂಡು ಶಾಲಾ ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುವಾಗ ಹಲವು ಬಾರಿ ಸ್ಥಳೀಯರಿಂದ ಹಲ್ಲೆಗೊಳಗಾಗಬೇಕಾದ ಸಂದರ್ಭಗಳೂ ಒದಗಿಬಂದವು. ನನ್ನ ಜೊತೆ ಕೆಲಸ ಮಾಡುವ ಹಲವಾರು ಶಿಕ್ಷಕರು ನನಗೆ ರೀತಿ ಕೆಲಸ ಮಾಡದಂತೆ ಮುಕ್ತ ಸಲಹೆ ನೀಡಿದರು. ಹಲವು ಬಾರಿ ನಾನು ಬದಲಾಗಬೇಕು ಅನ್ನಿಸಿದ್ದೂ ಉಂಟು. ಆದರೆ ಗುಣಾತ್ಮಕತೆಗೆ ರಾಜಿ ಏಕೆ? ಎಂಬುದನ್ನು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು.

ಮೇಲಿನ ಎರಡೂ ಘಟನೆಗಳು ನನ್ನ ಸೇವಾ ಅನುಭವದಿಂದ ಪಡೆದಿರುವಂತಹುಗಳು. ಶಿಕ್ಷಕರ ಅಸ್ಮಿತೆ ಕಾಲದಿಂದ ಕಾಲಕ್ಕೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ಹೇಗೆ ಬದಲಾವಣೆಗೆ ಪ್ರೇರೇಪಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸುತ್ತವೆ.

ಎಲ್ಲ ವೃತ್ತಿಗಳ ಆಚರಣೆಯಲ್ಲಿ ಅದರದೇ ಆದ ವೃತ್ತಿಪರ ಅಸ್ಮಿತೆ ಇದೆ. ಶಿಕ್ಷಕ ವೃತ್ತಿಯೂ ಇದರಿಂದ ಹೊರತಾಗಿಲ್ಲ. ಅನಾದಿ ಕಾಲದಿಂದಲೂ ಶಿಕ್ಷಕ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದ್ದಾನೆ. ಸಂಕೀರ್ಣ ಸಮಾಜದಲ್ಲಿ ಅಸ್ಮಿತೆ ಕಾಲಕಾಲಕ್ಕೆ ಬದಲಾಗಿರುವುದನ್ನು ಕಾಣಬಹುದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿಎಂಬ ದಾಸವಾಣಿ ಪ್ರಸ್ತುತ ಸನ್ನಿವೇಶದಲ್ಲಿ ಕಳೆದುಹೋಗಿದೆ. ಶಿಕ್ಷಕ ಈಗ ಬಹುಪಾತ್ರಾಭಿನಯದಾರಿ. ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣದ ತಲಾ 100ಜನ ಶಿಕ್ಷಕರನ್ನು ಹತ್ತು ಪ್ರಶ್ನಾವಳಿಗಳನ್ನು ಇಟ್ಟುಕೊಂಡು ಶಿಕ್ಷಕರ ಅಸ್ಮಿತೆ ಕುರಿತಾಗಿ ಪ್ರಶ್ನಿಸಿದಾಗ ಅವರೆಲ್ಲಾ ಶಿಕ್ಷಕರ ಅಸ್ಮಿತೆ ಬದಲಾಗುತ್ತಿರುವುದನ್ನು ಒಪ್ಪಿಕೊಳ್ಳುತ್ತಾರೆ. ಅದು ಅನಿವಾರ್ಯವೂ ಕೂಡ ಎಂಬ ನಿಲುವನ್ನು ಹೊಂದುತ್ತಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ 15 ವರ್ಷ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ 4 ವರ್ಷ ಸೇವೆ ಸಲ್ಲಿಸಿದ ನನಗೆ ಶಿಕ್ಷಕ ಕಂಡದ್ದು ಹೀಗೆ. ಬಳಪ ಹಿಡಿದರೆ ಮಾಸ್ತರ್, ಶಾಲೆ ದಾಖಲೆ ನಿರ್ವಹಿಸುವ ಹೆಡ್ ಮಾಸ್ತರ್, ಬಿಸಿಯೂಟಕ್ಕೆ ತರಕಾರಿ ತರುವ ತರಕಾರಿಯವ, ಸೌಟು ಹಿಡಿದು ನಿಂತರೆ ಬಾಣಸಿಗ, ವಿಷಲ್ ಹಿಡಿದು ಮೈದಾನಕ್ಕೆ ಇಳಿದರೆ ಆಟದ ಮೇಸ್ಟ್ರು, ತಾನೇ ಬೀಗ ತೆಗೆದು ಕಸಗುಡಿಸುವ ಆಯಾ, ಬಿಲ್ಡಿಂಗ್ ಕಟ್ಟಿಸುವ ಕಾಂಟ್ರ್ಯಾಕ್ಟರ್, ಲೆಕ್ಕ ಪತ್ರ ಇಡುವ ಗುಮಾಸ್ತ, ಸಾರ್ವಜನಿಕರಿಗೆ ಶೌಚಾಲಯ ತಿಳುವಳಿಕೆ ಕೊಡುವ ಜಾಗೃತಿದಾರ, ಚುನಾವಣೆ ಬಂದಾಗ ಮತಗಟ್ಟೆ ಅಧಿಕಾರಿ, ಕುರಿ-ಕೋಳಿ-ಜನ-ದನ ಎಣಿಸುವ ಗಣತಿದಾರ, ಶಾಲೆ ಆರಂಭದಲ್ಲಿ ಪುಸ್ತಕ, ಬಟ್ಟೆ ಹೊರುವ ಹಮಾಲಿ, ಶಾಲೆ ಸೋರುವಾಗ ತಾನೇ ರಿಪೇರಿಗೆ ನಿಲ್ಲುವ ಬಡಗಿ, ಶಾಲೆ ಬಿಟ್ಟ ಮಗುವನ್ನು ಕಾಡಿ ಬೇಡಿ ಶಾಲೆಗೆ ತರುವ ಸಾಮಾಜಿಕ ಕಾರ್ಯಕರ್ತ. ಇಷ್ಟೆಲ್ಲಾ ಪಾತ್ರಗಳನ್ನು ನಿರ್ವಹಿಸುವ ಶಿಕ್ಷಕನ ಅಸ್ಮಿತೆ ಬಣ್ಣಿಸುವುದೆಂತು?

ನೇಮಕ ಹೊಂದುವಾಗ ಕೇವಲ ಶಿಕ್ಷಕ ಆತ. ನಂತರ ಹಲವು ರೂಪಗಳನ್ನು ತೋರಿಸಲೇಬೇಕು. ಕೆಲವೊಮ್ಮೆ ತಾನು ಏನೆಂದು ಶಿಕ್ಷಕನಿಗೆ ಮರೆತೇ ಹೋಗಿರುತ್ತದೆ. ನನ್ನನ್ನು ಕಾಡುವ ಪ್ರಶ್ನೆಯೆಂದರೆ ಆತ ಪಾಠ ಮಾಡುವುದು  ಯಾವಾಗ? ಒಂದು ಶಾಲೆಯಲ್ಲಿ  1ರಿಂದ 8ರವರೆಗೆ ತರಗತಿಗಳು. ಮಕ್ಕಳ ಸಂಖ್ಯೆ 70. ಇರುವುದು ಇಬ್ಬರೇ ಶಿಕ್ಷಕರು. ಎಂಟು ತರಗತಿಗಳಲ್ಲಿ ಸುಮಾರು 40 ವಿಷಯಗಳು. ಇಬ್ಬರು ಶಿಕ್ಷಕರು 40 ವಿಷಯಗಳನ್ನು ಬೋಧಿಸಬೇಕು. ಕೇವಲಕಲಿಸುಎಂದರೆ ಹೇಗೋ ಕಲಿಸಬಹುದು. ಆದರೆ ಅವನನ್ನು ಕಲಿಸಲು ಬಿಟ್ಟರೆ ತಾನೆ? ಇದು ಒಂದು ಶಾಲೆಯಲ್ಲಿನ ಶಿಕ್ಷಕನ ಅಸ್ಮಿತೆಯಾದರೆ ಮತ್ತೊಂದು ಶಾಲೆಯ ಅಸ್ಮಿತೆಯೇ ಬೇರೆ. ಅಲ್ಲಿ 100 ಜನ ವಿದ್ಯಾರ್ಥಿಗಳಿಗೆ 8 ಜನ ಶಿಕ್ಷಕರು. ಇಬ್ಬರ ಶಿಕ್ಷಕರಿಗೆ ಪಾತ್ರಗಳೇ ಇಲ್ಲ. ಇವೇ ಕಾರಣಗಳು ಶಿಕ್ಷಕನ ಅಸ್ಮಿತೆಯನ್ನು ಪ್ರದೇಶದಿಂದ ಪ್ರದೇಶಕ್ಕೆ ಬದಲಾಯಿಸುತ್ತವೆ.

ಅಮೆರಿಕದ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಅವಕಾಶ ಸಿಕ್ಕ ನನಗೆ ನಮ್ಮ ವ್ಯವಸ್ಥೆ ಕಂಡು ಅನ್ನಿಸಿದ್ದು ಹೀಗೆ. ನಮ್ಮ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣಕ್ಕೆ ಕೊಡುವ ಮಹತ್ವ, ಸಂಬಳ, ಸವಲತ್ತುಗಳು ಹೇಗಿವೆ ಎಂದರೆ ಮಣ್ಣಿನಿಂದ ತಳಪಾಯ ಕಟ್ಟಿ ಅದರ ಮೇಲೆ ಬಲಿಷ್ಠ ಉಕ್ಕು ಮತ್ತು ಸಿಮೆಂಟಿನಿಂದ ಭವ್ಯ ಬಂಗಲೆ ನಿರ್ಮಿಸುವಂತೆ. ಎರಡು ಅವಧಿಯನ್ನು ಬೋಧಿಸಿ ಲಕ್ಷ ಲಕ್ಷ ಎಣಿಸುವ ಉನ್ನತ ವ್ಯವಸ್ಥೆ ಮತ್ತು ಬಹುಪಾತ್ರಗಳನ್ನು ಅಭಿನಯಿಸಿ ಸಾವಿರ ಎಣಿಸುವ ಕೆಳಹಂತದ ವ್ಯವಸ್ಥೆ. ಅಸಮಾನತೆ ಶಿಕ್ಷಕರ ಅಸ್ಮಿತೆ ಮೇಲೆ ಪ್ರಭಾವ ಬೀರಿ ವ್ಯವಸ್ಥೆಯ ಸೌಧ ಕುಸಿದು ಬೀಳುವತ್ತ ಸಾಗಿರುವುದು. ಶಿಕ್ಷಣಕ್ರಮದ ಬಹುತೇಕ ಕಾರ್ಯಕ್ರಮಗಳು .ಸಿ ಕೊಠಡಿಯಲ್ಲಿ ತಯಾರಾಗುತ್ತಿರುವುದು ನಿಜಕ್ಕೂ ವಿಷಾದನೀಯ. ಮಗು-ಶಿಕ್ಷಣ-ಪಠ್ಯಕ್ರಮ ಚಟುವಟಿಕೆ ಸಂಬಂಧಿ ಚರ್ಚೆ, ಯೋಜನೆ, ತೀರ್ಮಾನಗಳು ಶಿಕ್ಷಕರಿಂದಲೇ ಆಗಬೇಕು. ವಿಮರ್ಶೆಗೆ ಸಾರ್ವಜನಿಕರ ಮುಂದಿಡಬೇಕು. ಶಾಲೆ, ಮಗು, ಕಲಿಕಾ ಸಂಬಂಧಿ ಸಮಸ್ಯೆ ಶಿಕ್ಷಕರಿಗೇ ಗೊತ್ತು ಹೊರತು ಅಧಿಕಾರಿಗಳಿಗಲ್ಲ. ಇದನ್ನು ಪ್ರಶ್ನಿಸಲು ಹೋದ ಶಿಕ್ಷಕರಿಗೆ ಸಿಗುವುದು ಸಿದ್ಧ ಉತ್ತರನಾವು ಹೇಳಿದಂತೆ ಕೇಳಿ.’ ಶಿಕ್ಷಣ ಇಲಾಖೆಗೆ ಹರಿದು ಬರುತ್ತಿರುವಷ್ಟು ಪ್ರತಿಭಾವಂತರು ಯಾವ ಇಲಾಖೆಗೂ ಹೋಗುತ್ತಿಲ್ಲ. ಆದರೆ ವ್ಯವಸ್ಥೆಯಿಂದ ಭ್ರಮನಿರಸನಗೊಂಡು ತಮ್ಮ ಅಸ್ಮಿತೆಯನ್ನು ಕಳೆದುಕೊಂಡಿದ್ದೂ ಉಂಟು.

 

ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರು ತಮ್ಮ ಅಸ್ಮಿತೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ ಎಂದು ಶಿಕ್ಷಕರೇ ಪ್ರಶ್ನಾವಳಿಗೆ ಉತ್ತರಿಸುತ್ತಾ ಒಪ್ಪಿಕೊಂಡಿದ್ದಾರೆ.

1)            ಇಂದಿನ ಶಿಕ್ಷಕನ ನಡೆ ಮತ್ತು ನುಡಿ ಒಂದಾಗದಿರುವುದು

2)            ಶಿಕ್ಷಕ ವೃತ್ತಿಯನ್ನು ಒಂದು ನೌಕರಿಯನ್ನಾಗಿ ಮಾತ್ರ ನೋಡುತ್ತಿರುವುದು

3)            ಶಿಕ್ಷಕ-ಮಗುವಿನ ನಡುವಿನ ಅಂತರ ದೂರವಾಗಿ ಸಮಾಜದಿಂದಲೂ ಅಂತರ ಕಾಯ್ದುಕೊಂಡಿರುವುದು.

ಮೊದಲೆಲ್ಲಾ ಶಿಕ್ಷಕನ ಮಾತು ಎಂದರೆ ಅದು ವೇದವಾಕ್ಯ. ಶಾಲಾ ವ್ಯಾಪ್ತಿಯ ಪ್ರದೇಶದಲ್ಲಿ ಏನೇ ಕಾರ್ಯಕ್ರಮ ನಡೆಯಲಿ ಅದಕ್ಕೆ ಶಿಕ್ಷಕನದ್ದೇ ಸಾರಥ್ಯ. ಶಿಕ್ಷಕನ ಅಣತಿಯಿಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡುವಂತಿರಲಿಲ್ಲ. ಶಿಕ್ಷಕನ ನಡೆ ಮತ್ತು ನುಡಿ ರೀತಿಯ ಹಿಡಿತವನ್ನು ಸಮಾಜದ ಮೇಲೆ ಇಟ್ಟುಕೊಂಡಿತ್ತು. ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ: ಎಂದು ಸಮಾಜ ನಂಬಿಕೆ ಇಟ್ಟಿತ್ತು. ಆತ ಕೇವಲ ಪುಸ್ತಕದಲ್ಲಿದ್ದುದನ್ನು ವಿದ್ಯಾರ್ಥಿಗಳಿಗೆ ಒಪ್ಪಿಸುವವನಲ್ಲ. ಗುರುವೆಂದರೆ ಶಿಷ್ಯಂದಿರಿಗೆ ಮೌಲ್ಯಾಧಾರಿತ ಜೀವನ ಶಿಕ್ಷಣ ನೀಡುವ ದೈವಸ್ವರೂಪಿ. ಕೈಗೆ ಸಿಕ್ಕ ಮಣ್ಣಿನ ಮುದ್ದೆಯಂತೆ ತಿದ್ದಿ ತೀಡಿ ಒಂದು ಸುಂದರ ರೂಪಕೊಡುವ ಶಿಲ್ಪಿ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಗುರುತಿಸಿ ನೀರೆರುಯುವಾತ ಎಂದು ಜನ ಕೊಂಡಾಡಿ ಗುರುವಿಗೆ ದೈವಸ್ವರೂಪಿ ಸ್ಥಾನವನ್ನು ನೀಡಿತ್ತು. ಕಾಲದ ಅಂತಹ ಗುರು, ಕಾಲದ ಶಿಕ್ಷಕ ಪ್ರಸಕ್ತ ಸನ್ನಿವೇಶದಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಸತ್ಯ. ಏಕೆಂದರೆ ಈಗ ಕಾಲ ಬದಲಾಗಿದೆ. ಕಾಲದೊಂದಿಗೆ ಜನರೂ ಬದಲಾಗಿದ್ದಾರೆ.

ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಕರ ಗುಣಮಟ್ಟದ ಬಗ್ಗೆ ಅನೇಕ ಅಪನಂಬಿಕೆಗಳು, ಆರೋಪಗಳು, ಮಾಡಲ್ಪಡುತ್ತಿವೆ. ಇದು ಅನೇಕ ಸನ್ನಿವೇಶಗಳಲ್ಲಿ ಸತ್ಯವೆಂದು ಸಾಬೀತಾಗಿದೆ. ಶಿಕ್ಷಕ ಈಗ ಒಂದು ನಿರ್ದಿಷ್ಟ ಸಮುದಾಯ, ಸಮಾಜದ ನಾಯಕನಾಗಿ ಬೆಳೆಯುತ್ತಿದ್ದಾನೆ. ಶಾಲಾ ನಾಯಕತ್ವವನ್ನು ಸರಿಯಾಗಿ ವಹಿಸಿಕೊಳ್ಳದ ಶಿಕ್ಷಕರನ್ನು ನಾನು ಕಂಡಿದ್ದೇನೆ.  ನನ್ನ ಸೇವಾ ಅವಧಿಯಲ್ಲಿ  ಹಲವು ಸಾವಿರ ಶಿಕ್ಷಕರನ್ನು ಬಹು ಸಮೀಪದಿಂದ ಕಂಡಿದ್ದೇನೆ. ನನ್ನ ಕ್ಷೇತ್ರ ಅಧ್ಯಯನದ ಆಧಾರದ ಮೇಲೆ ಪ್ರಾಥಮಿಕ ಶಾಲೆಯ ಶಿಕ್ಷಕರ ಅಸ್ಮಿತೆಗೆ ನಾಲ್ಕು ಪ್ರಮುಖ ಮಾನದಂಡಗಳನ್ನಾಗಿ ನೋಡಬಯಸುತ್ತೇನೆ.

1)            ವಿಷಯ ಪರಿಣಿತಿ- ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಅವರ ನಡುವೆ ಒಂದು ಪೀಳಿಗೆಯ ಅಂತರ ಉಂಟಾಗುತ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ಶಿಕ್ಷಕರು ತಾವು ಕಲಿತ ವಿಷಯಗಳನ್ನು ಅವುಗಳ ಮೇಲಿನ ಪರಿಣಿತಿಯನ್ನು ವರ್ಷಗಳ ಕಾಲ ನಿರಂತರವಾಗಿ ಅದೇ ಮಟ್ಟದಲ್ಲಿ ಉಳಿಸಿಕೊಳ್ಳಲು ಸೋಲುತ್ತಾರೆ. ಅಲ್ಲದೇ ಬದಲಾದ ಕಾಲಘಟ್ಟದಲ್ಲಿ ವಿಷಯಗಳ ಮೇಲಿನ ಗ್ರಹಿಕೆಗಳೂ ತನ್ನ ಮೂಲಭೂತ ಅಂಶಗಳನ್ನು ಇಟ್ಟುಕೊಂಡೇ ತಂತಾನೆ ಬದಲಾವಣೆಗಳಿಗೆ ಒಳಪಡುತ್ತಿರುತ್ತವೆ. ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ರೀತಿಯ ಗುಣಾತ್ಮಕ ಬದಲಾವಣೆಗಳಿಗೆ ನಮ್ಮ ಶಿಕ್ಷಕರು ಒಗ್ಗಿಕೊಳ್ಳುವುದೇ ಇಲ್ಲ. ಗಣಿತ, ವಿಜ್ಞಾನ, ಸಮಾಜಶಾಸ್ತ್ರದ ವಿಷಯಗಳ ಪಠ್ಯಗಳು ಸದಾ ಅಪ್ಡೇಟ್ ಆಗುತ್ತಿರುವಂತೆಯೇ ಸಂಬಂಧಪಟ್ಟ ಶಿಕ್ಷಕರೂ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಆದರೆ ಹಾಗಾಗುವುದೇ ಇಲ್ಲ. ಶಿಕ್ಷಕರು ಬಾವಿಯೊಳಗಿನ ಕಪ್ಪೆಗಳಾಗಿಯೇ ಉಳಿದುಬಿಡುತ್ತಿದ್ದಾರೆ. ಹಿಂದಿನ ಪೀಳಿಗೆ ಶಿಕ್ಷಕರು ಇಂದಿನ ಪೀಳಿಗೆಯ ಮಕ್ಕಳಿಗೆ ಬೋರ್ ಅನಿಸುತ್ತಾರೆ.

2)            ಕೆಲಸದಲ್ಲಿನ ವೃತ್ತಿಪರತೆ- ಇದು ವಿದ್ಯಾರ್ಥಿಗಳ ಒಟ್ಟಾರೆ ಗುಣಮಟ್ಟವನ್ನು ನಿರ್ಧರಿಸುತ್ತದೆ. ಇದಕ್ಕೆ ನಮ್ಮ ಶಿಕ್ಷಕರ ತರಬೇತಿ,  ಪಠ್ಯಪುಸ್ತಕಗಳು ಗುಣಮಟ್ಟದ ಜೊತೆಜೊತೆಗೆ ಶಿಕ್ಷಕರ ವೈಯಕ್ತಿಕ ತಿಳುವಳಿಕೆಗಳೂ ಪ್ರಮುಖ ಪಾತ್ರವಹಿಸುತ್ತವೆ. ಶಿಕ್ಷಕ ಪಾಠ ಮಾಡುವಾಗ ವಿದ್ಯಾರ್ಥಿಗಳ ಸಾಮಾಜಿಕ, ಕೌಟುಂಬಿಕ ಹಿನ್ನಲೆ, ಅವರ ಸಾಮಾಜಿಕ ಸ್ಥಿತಿಗತಿ ಎಲ್ಲವನ್ನೂ ಗಮನದಲ್ಲಿಟ್ಟು ಅಪಾರ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕನಿಷ್ಠ ಮಟ್ಟದ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ತಮ್ಮ ದೈನಂದಿನ ಕೆಲಸದ ಜೊತೆ ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಮೀಸಲಿರಿಸಬೇಕು. ವೃತ್ತಿಪರತೆ ಸಾಧಿಸಲು ನಮ್ಮ ಶಿಕ್ಷಣ ತರಬೇತಿ ವಿಧಾನಗಳು ವಿಫಲವಾಗುತ್ತಿವೆ.

ಶಿಕ್ಷಕರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋಭೂಮಿಕೆ, ಅವರ ಸಾಮಾಜಿಕ ಹಿನ್ನೆಲೆ, ಅವರು ವಾಸಿಸುವ ಗ್ರಾಮದ ಪರಿಸರ ಇವೆಲ್ಲವೂ ಮನದಟ್ಟಾಗುವ ಸಾಧ್ಯತೆಗಳು ಕಡಿಮೆಯಾಗಿವೆ. ಶಿಕ್ಷಣ ವ್ಯವಸ್ಥೆಯ ಮಧ್ಯಮ ವರ್ಗದ ಪರ ಸಾರ್ವತ್ರಿಕ ಒಲವು ಗ್ರಾಮೀಣ ವಿದ್ಯಾರ್ಥಿಗಳನ್ನು ನುಂಗಿಹಾಕಿದೆ. ಎಲ್ಲಾ ದೌರ್ಬಲ್ಯಗಳನ್ನು ಮೀರಲು ಶಿಕ್ಷಕರಲ್ಲಿ ಅಪಾರವಾದ ಅರ್ಪಣಾ ಮನೋಭಾವ ಬೇಕಾಗುತ್ತದೆ. ಅರ್ಪಣಾ ಮನೋಭಾವದ ಕೊರತೆಯೂ ಶಿಕ್ಷಕರ ಅಸ್ಮಿತೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ.

3)            ನಗರಕೇಂದ್ರಿತ ಶಿಕ್ಷಕರು-ನಗರದಲ್ಲಿ 15ವರ್ಷ ಸೇವೆ ಸಲ್ಲಿಸಿದ ನನಗೆ ಅರಿವಿಗೆ ಬಂದಿದ್ದು ಶಿಕ್ಷಕರು ತಮಗೆ ಗೊತ್ತಿಲ್ಲದೇ ತಮ್ಮ ಮನಸ್ಸು ಹಾಗೂ ಮಿದುಳನ್ನು ನಗರಕೇಂದ್ರಿತವಾಗಿರಿಸಿಕೊಂಡಿದ್ದಾರೆ. ಇಲ್ಲಿ ಅವರಿಗೆ ಸಿಗುತ್ತಿರುವ ಸೌಲಭ್ಯ ಮತ್ತು ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದನ್ನು ಮರೆಯುತ್ತಿದ್ದಾರೆ. ಸಂಘ, ಸಂಸ್ಥೆ ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡು ಬೋಧನೆಯಿಂದ ವಿಮುಖರಾಗಿ ಕೇವಲ ಸಂಘಟಕರಾಗಿದ್ದಾರೆ. ರೀತಿ ನಗರೀಕರಣಗೊಂಡ ಶಿಕ್ಷಕರು ತಮ್ಮ ಅರಿವಿಗೆ ಮೀರಿ ಕೂಪಮಂಡೂಕಗಳಾಗುತ್ತಿದ್ದಾರೆ. ಜಾತ್ಯಾತೀತತೆಯನ್ನು ಮರೆಯುತ್ತಿದ್ದಾರೆ. ಹಿಂದಿನ ಕಾಲದ ನಿಸ್ವಾರ್ಥ, ಸಮರ್ಪಣಾ ಮನೋಭಾವ ಇಂದಿನ ಶಿಕ್ಷಕರಲ್ಲಿ ಮಾಯವಾಗಿದೆ. ಇದು ಶಹರದಲ್ಲಿ ಕೆಲಸ ಮಾಡುವ ಶಿಕ್ಷಕರ ಕಥೆಯಾದರೆ ಶೇಕಡಾ 40ರಷ್ಟು ಶಿಕ್ಷಕರು ತಾವು ಕೆಲಸ ಮಾಡುವ ಹಳ್ಳಿಯಲ್ಲಿ ವಾಸಿಸುವುದಿಲ್ಲ. ಪ್ರತಿದಿನ ಕೆಲಸಕ್ಕಾಗಿ ಸರಾಸರಿ 40 ಕಿ.ಮೀ ಪರವೂರಿಗೆ ಪ್ರಯಾಣ ಮಾಡುತ್ತಾರೆ. ಇಲ್ಲಿ ವೃತ್ತಿಪರತೆ ಕುಂಠಿತಗೊಳ್ಳುತ್ತದೆ. ವೈಯಕ್ತಿಕ ಹಿತಾಸಕ್ತಿ ಮೇಲುಗೈ ಪಡೆದುಕೊಳ್ಳುತ್ತದೆ. ಇದರಿಂದ ವಿದ್ಯಾರ್ಥಿ-ಶಿಕ್ಷಕ, ಶಿಕ್ಷಕ-ಸಮುದಾಯದ ನಡುವಿನ ಅಂತರ ಹೆಚ್ಚಾಗುತ್ತಾ ಸಾಗಿದೆ.

4)            ಪರೀಕ್ಷಾ ಶಿಕ್ಷಕರು- ಶಾಲೆಯಲ್ಲಿನ ಶಿಕ್ಷಕರ ಪೈಕಿ ಪರೀಕ್ಷೆ ತೆಗೆದುಕೊಳ್ಳುವ ಶಿಕ್ಷಕರನ್ನು ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ಅಂತೆಲೇ ಅವರು ಕಲಾ ಶಿಕ್ಷಕರು, ದೈಹಿಕ ಶಿಕ್ಷಕರನ್ನು ಹೆಚ್ಚು ಇಷ್ಟಪಡುತ್ತಾರೆ. ಅಥವಾ ಯಾವ ಶಿಕ್ಷಕರು ಪರೀಕ್ಷೆಯನ್ನು ಪರೀಕ್ಷೆ ಮಾಡದೇ ಇರುವ ಹಾಗೆ ತೆಗೆದುಕೊಳ್ಳುತ್ತಾರೆಯೋ ಅವರನ್ನು ಇಷ್ಟಪಡುತ್ತಾರೆ. ಯಾವ ಶಿಕ್ಷಕರು ವಿಷಯವನ್ನು ಪರೀಕ್ಷೆಗಾಗಿ ಹೇಳದೇ ವಿಭಿನ್ನವಾಗಿ ಕಟ್ಟಿಕೊಡುತ್ತಾರೆಯೋ ಶಿಕ್ಷಕರ ಮೇಲಿನ ಪ್ರೀತಿ, ಕಾಳಜಿ ಮತ್ತು ವಿಷಯಗಳ ಮೇಲೆ ಹಿಡಿತ ಉಂಟಾಗಿ ಶಿಕ್ಷಕನಿಗೆ ವಿಭಿನ್ನ ಅಸ್ಮಿತೆಯನ್ನು ಒದಗಿಸಿಕೊಡುತ್ತದೆ.

ನನ್ನ ಪ್ರಮುಖ ವಾದ ಶಿಕ್ಷಕನ ಅಸ್ಮಿತೆಗೆ ಧಕ್ಕೆ ಬಂದಿದೆ ಎನ್ನುವುದು. ಇದಕ್ಕೆ ಶಿಕ್ಷಕನ ಹಾಗೂ ಸಮಾಜದ ಬದಲಾದ ಮನೋಭಾವವೇ ಮುಖ್ಯ ಕಾರಣ ಎನ್ನಿಸುತ್ತದೆ. ಸಮಾಜ ಶಿಕ್ಷಕ ಹೀಗೆ ಇರಬೇಕು ಎಂಬ ಚೌಕಟ್ಟು ಹಾಕಿದರೆ, ಶಿಕ್ಷಕನಿಂದ ಬದ್ಧತೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದೂ ಸತ್ಯ. ಶಿಕ್ಷಕನಿಗೆ ನೀನೂ ಹೀಗೆ ಇರಬೇಕು, ಇವೆಲ್ಲಾ ನಿನ್ನ ಅಸ್ಮಿತೆಯ ಲಕ್ಷಣಗಳು ಎಂದು ಸಿದ್ದ ಮಾದರಿಗಳನ್ನು ನೀಡುವುದಲ್ಲ. ಅವನು ಕಾಲದೊಂದಿಗೆ ಹೊಂದಿಕೊಂಡು ಆದರ್ಶ, ಮೌಲ್ಯಗಳನ್ನು ಪ್ರತಿಪಾದಿಸುವ ಸಾಮಥ್ರ್ಯ ಹೊಂದಿದವನಾಗಿರಬೇಕಾಗುತ್ತದೆ.

ಶಿಕ್ಷಕನಿಗೂ ವೈಯಕ್ತಿಕ ಬದುಕು ಇದೆ. ಬಹುಪಾತ್ರಗಳ ನಡುವೆಯೂ ಅವನಿಗೆ ಅಪ್ಪ, ಅಮ್ಮ, ಹೆಂಡತಿ, ಗಂಡ, ಮಕ್ಕಳಿದ್ದಾರೆ. ಅವರಿಗೂ ಸಮಯ ಕೊಡಬೇಕಲ್ಲವೇ? ಶಿಕ್ಷಕನೊಳಗೆ ಒಬ್ಬ ಮನುಷ್ಯನಿದ್ದಾನೆ. ಅವನಿಗೂ ಆಶೆ, ಆಕಾಂಕ್ಷೆಗಳಿವೆ. ಶಿಕ್ಷಕನಾದ ಮಾತ್ರಕ್ಕೆ ಅವನು ಪರಿತ್ಯಕ್ತ ಸನ್ಯಾಸಿಯೇ? ಶಿಕ್ಷಕರನ್ನು ಎಲ್ಲರಂತೆ ಕಾಣಲು ಬಯಸಿ. ಮಕ್ಕಳ ಉಳಿವಿಗಾಗಿ, ಗುಣಮಟ್ಟದ ಶಿಕ್ಷಣಕ್ಕಾಗಿ, ಶಾಲೆಗಳ ಉಳಿವಿಗಾಗಿ ರಾಜ್ಯಮಟ್ಟದಲ್ಲಿ ಬೃಹತ್ಕ್ರಾಂತಿ ಆಗಲೇಬೇಕಿದೆ. ಬಹುದಿನಗಳಿಂದ ಕೂಡಿರುವ ಕೊಳೆಯನ್ನು ತೊಳೆಯಬೇಕಿದೆ. ಕಪ್ಪು ಕವಿದಿರುವ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕನ ಬದುಕಿಗೆ ಭಾಗ್ಯದ ಬೆಳಕನ್ನು ತೋರಿಸಬೇಕಿದೆ. ಶಿಕ್ಷಕನ ಅಸ್ಮಿತೆ ಉಳಿಯಬೇಕಿದೆ. ಒಂದು ನಾಡು ಎಂದಿಗೂ ಕೂಡ ಅಲ್ಲಿನ ಶಿಕ್ಷಕರನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ. ಅದನ್ನು ಅರಿತರೆ ಮಾತ್ರ ಅಭಿವೃದ್ಧಿಯ ದಾಪುಗಾಲು ಸಾಧ್ಯ.

ಶಿಕ್ಷಕರಿಗಾಗಿ ಬಳಸಿದ ಪ್ರಶ್ನಾವಳಿ

1)            ತಾವು ವೃತ್ತಿಗೆ ಇಷ್ಟಪಟ್ಟು ಬಂದಿದ್ದೀರಾ?

2)            ನಿಮಗೆ ಬಾಲ್ಯದಲ್ಲಿ ಕಲಿಸಿದ ಗುರುಗಳ ಹೆಸರುಗಳನ್ನು ಹೇಳಿ

3)            ಅವರು ನಿಮಗೆ ಏಕೆ ನಿಮ್ಮ ಸ್ಮøತಿಪಟಲದಲ್ಲಿ ಉಳಿದುಕೊಂಡಿದ್ದಾರೆ?

4)            ನಿಮ್ಮ ವೃತ್ತಿಯ ಬಗ್ಗೆ ನಿಮಗೆ ಸಮಾಧಾನವಿದೆಯೇ? ಕಾರಣಕೊಡಿ

5)            ವರ್ಷವಿಡೀ ತಾವು ಶಾಲೆಗಾಗಿ/ಇಲಾಖೆಗಾಗಿ ಮಾಡುವ ಕಾರ್ಯಗಳನ್ನು ಪಟ್ಟಿಮಾಡಿ.

6)            ನೀವು ನುಡಿದಂತೆ ನಡೆಯುತ್ತೀರಾ?

7)            ತಾವು ಗ್ರಾಮೀಣ/ನಗರ ಎಲ್ಲಿ ಇರಲು ಇಷ್ಟಪಡುತ್ತೀರಾ? ಏಕೆ?

8)            ವೃತ್ತಿ-ವೈಯಕ್ತಿಕ ಬದುಕು ಯಾವುದಕ್ಕೆ ತಾವು ಹೆಚ್ಚು ಸಮಯವನ್ನು ನೀಡುವಿರಿ?

9)            ಪ್ರತಿದಿನ ತಾವು ಎಷ್ಟು ಸಮಯ ಶಾಲಾ ಸಿದ್ಧತೆಗಾಗಿ ನೀಡುವಿರಿ?

10)          ಶಿಕ್ಷಕ-ಮಗು-ಪಾಲಕ ನಡುವಿನ ಅಂತರ ಹೆಚ್ಚಾಗಿದೆಯೇ? ಕಾರಣ ಕೊಡಿ

ಆಕರಗಳು

1)            ಗುಡ್ ಟೀಚರ್-ಪಟ್ಟಾಭಿರಾಮ್

2)            ಶಿಕ್ಷಣ ಸಿಂಚನ-ಪರಮೆಶ್ವರಯ್ಯ ಸೊಪ್ಪಿಮಠ

3)            ಟೀಚರ್-ಗುರುಬಸವರಾಜ ಆರ್.ಬಿ

4)            ಶಿಕ್ಷಕನ ದೃಷ್ಟಿಯಲ್ಲಿ ಅಮೆರಿಕಾ-ಡಾ.ಲಿಂಗರಾಜ ರಾಮಾಪೂರ

5)            ಗುಬ್ಬಚ್ಚಿ ಗೂಡು- ಮಕ್ಕಳ ಮಾಸಪತ್ರಿಕೆ, ಧಾರವಾಡ

6)            ಜೀವನ ಶಿಕ್ಷಣ ಮಸಪತ್ರಿಕೆ, ಡೈಟ್ ಧಾರವಾಡ

 

ಡಾ.ಲಿಂಗರಾಜ ರಾಮಾಪೂರ ಅವರು ಪ್ರಸ್ತುತ ಹುಬ್ಬಳ್ಳಿ ಶಹರ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿ(ಬಿ.ಆರ್.ಪಿ)ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಮಕ್ಕಳ ಶಿಕ್ಷಣದ ಮೇಲೆ ಗ್ರಾಮೀಣ ಕ್ರೀಡೆಗಳ ಪ್ರಭಾವಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ಡಾ.ಲಿಂಗರಾಜ ರಾಮಾಪೂರ ಶಿಕ್ಷಕರಾಗಿ, ಸಾಹಿತಿಗಳಾಗಿ, ಸಂಶೋಧಕರಾಗಿ, ನಾಟಕಕಾರರಾಗಿ, ಪರಿಸರವಾದಿಗಳಾಗಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ವಿಜ್ಞಾನದಲೆಯ ಬೆಳಕು’, ‘ವೈಜ್ಞಾನಿಕ ಕಥೆಗಳು’, ‘ಭೂಮಿ ಮಾರಾಟಕ್ಕಿಲ್ಲ’, ‘ಪರಿಸರದೊಳಗಿನ ಸತ್ಯದ ಮಾತು’, ‘ದೊಡ್ಡವರು ಚಿಕ್ಕವರಿದ್ದಾಗಹೀಗೆ ಹಲವು ಕೃತಿಗಳ ಮೂಲಕ ಕಥೆ, ಕವನ, ಕಾದಂಬರಿ, ವಿಜ್ಞಾನ ಹಾಗೂ ಪರಿಸರ ಬರಹಗಳಲ್ಲಿ ಸಾಹಿತ್ಯ ಸೃಷ್ಟಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಗುಬ್ಬಚ್ಚಿ ಗೂಡುಮಕ್ಕಳ ಪತ್ರಿಕೆಯ ಸಹಾಯಕ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಪ್ರಮುಖ ದಿನಪತ್ರಿಕೆಗಳಲ್ಲಿ 200ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಪ್ರಾಥಮಿಕ ಶಿಕ್ಷಣದ ಕುರಿತಾಗಿ ಇವರು ತಮ್ಮ ಶಾಲೆಯಲ್ಲಿ ಮಾಡಿದ ಪ್ರಯೋಗಗಳನ್ನು ಗುರುತಿಸಿ, ಶಿಕ್ಷಣ ಫೌಂಡೇಶನ್ ಇವರಿಗೆ ಡಾ..ಪಿ.ಜೆ ಅಬ್ದುಲ್ ಕಲಾಂ ಅವರಿಂದಗುರು ಪುರಸ್ಕಾರನೀಡಿ ಗೌರವಿಸಿ ಅವರನ್ನು ಅಮೆರಿಕದ ಸರಕಾರಿ ಶಾಲೆಗಳ ಅಧ್ಯಯನಕ್ಕೆ ಕಳುಹಿಸಿತ್ತು. ಅದನ್ನೆಲ್ಲಾ ತಮ್ಮ ಪ್ರವಾಸ ಕಥನಶಿಕ್ಷಕನ ನೋಟದಲ್ಲಿ ಅಮೆರಿಕದಲ್ಲಿ ದಾಖಲಿಸಿದ್ದಾರೆ. ಇವರನ್ನು iಟಿgಚಿಡಿಚಿರಿu78@gmಚಿi.ಛಿom ಇಲ್ಲಿ ಸಂಪರ್ಕಿಸಬಹುದು.

No comments:

Post a Comment