Sunday, 29 March 2020

ಮಾತನಾಡುವ ಗುಬ್ಬಕ್ಕ


ಮಾತನಾಡುವ ಗುಬ್ಬಕ್ಕ

ನವಂಬರ್ 2012 ಗುಬ್ಬಚ್ಚಿ ಗೂಡುಮಕ್ಕಳ ಮಾಸಪತ್ರಿಕೆಯಲ್ಲಿ ಪ್ರಕಟವಾದ ಕಥೆ

``ನೇಹಾ, ಬೇಗ ಬೇಗ ರೆಡಿ ಆಗು. ಶಾಲೆಗೆ ಹೊತ್ತಾಯ್ತು’’ ಅಮ್ಮನ ಮಾತು. ``ಹಾಂ ಅಮ್ಮಾ, ರೆಡಿ ಆದೆ. ಎರಡೇ ನಿಮಿಷ’’ ನಾನು ಉತ್ತರಿಸಿದೆ.

ಆಗ ತಾನೇ ಶಾಲೆ ಪ್ರಾರಂಭವಾಗಿತ್ತು. ನಾನು 6ನೇ ವರ್ಗದಲ್ಲಿ ಓದುತ್ತಿದ್ದೆ. ಶಾಲೆಗೆ ಹೋಗಲು ಅಪ್ಪ ನನಗೊಂದು ಹೊಸ ಸೈಕಲ್ ಕೊಂಡು ತಂದಿದ್ದರು. ಶಾಲೆ ಮನೆಯಿಂದ ಒಂದು ಕಿ.ಮೀ ದೂರವಿತ್ತು. ಅಮ್ಮ ಡಬ್ಬದಲ್ಲಿ ಊಟ ಹಾಕಿ ಪ್ಯಾಕ್ ಮಾಡಿ ತಂದು ಕೊಟ್ಟರು. ಡಬ್ಬವನ್ನು ಬ್ಯಾಗಿಗೆ ಹಾಕಿಕೊಂಡು ನೀರಿನ ಬಾಟಲಿ ಎತ್ತಿಕೊಂಡು ಹೊಸ ಹುರುಪಿನೊಂದಿಗೆ ಅಮ್ಮನಿಗೆ ಟಾಟಾ ಮಾಡುತ್ತಾ ಶಾಲೆಗೆ ಹೊರಟೆ.

ಬೇಸಿಗೆ ರಜೆ ಕಳೆದು ಶಾಲೆ ಮತ್ತೆ ಪ್ರಾರಂಭವಾಗಿತ್ತು. ಕೆಲವೆ ಮಕ್ಕಳು ಅಂದು ಶಾಲೆಗೆ ಬಂದಿದ್ದರು. ಎಲ್ಲರೂ ಸೇರಿ ಶಾಲೆಯನ್ನು ಸ್ವಚ್ಛಗೊಳಿಸುತ್ತಿದ್ದೆವು. ಯಾರೋ ನನ್ನ ಕಿವಿಯಲ್ಲಿ ಕಚಗುಳಿ ಇಟ್ಟಂತಾಯ್ತು. ಹಿಂತಿರುಗಿ ನೋಡಿದರೆ ನನ್ನ ಕ್ಲೋಜ್ ಫ್ರೆಂಡ್ ಸಾನವಿ ಕೈಯಲ್ಲಿ ಕೆಲ ಪಕ್ಷಿಗಳ ಪುಕ್ಕಗಳನ್ನು ಹಿಡಿದು ನಿಂತಿದ್ದಳು.

ಏನೇ ಸಾನವಿ ಏನಿವು?” ಎಂದು ಕೇಳಿದೆ.

ಬಾ ಇಲ್ಲಿ ತೋರಿಸ್ತೀನಿಎಂದು ಸಾನವಿ ನನ್ನನ್ನು ಪಕ್ಕದ ಕೊಠಡಿಗೆ ಕರೆದುಕೊಂಡು ಹೋದಳು. ಕೋಣೆಯ ತುಂಬಾ ಬೇರೆ ಬೇರೆ ಬಣ್ಣದ ಪುಕ್ಕಗಳು ಹರಡಿದ್ದವು. ಮೇಲೆ ನೋಡಿದರೆ ಒಂದು ಪಕ್ಷಿಯ ಗೂಡು ಕಂಡುಬಂದಿತು.  ವರ್ಗದ ಕಿಟಕಿ ಮುರಿದಿದ್ದರಿಂದ ಅದರ ಮೂಲಕ ಪಕ್ಷಿಗಳು ಒಳಗೆ ಗೂಡು ನಿರ್ಮಿಸಿದ್ದವು. ನಮಗೆ ಕುತೂಹಲ. ಕೆಲ ಪುಕ್ಕಗಳನ್ನು ಆಯ್ದುಮಿಸ್ ಮಿಸ್ಎನ್ನುತ್ತ ಇಂದಿರಾ ಟೀಚರ್ ಬಳಿ ಓಡಿದೆವು. ಟೀಚರ್ ಬಣ್ಣಗಳ ಅಧಾರದ ಮೇಲೆ ಅವು ಯಾವ ಪಕ್ಷಿಗೆ ಸೇರಿದವು ಎಂಬುದನ್ನು ವಿವರಿಸಿದರು. ಕಂದು-ಕಪ್ಪು ಬಣ್ಣದ ಪುಕ್ಕಗಳು ಮೈನಾ ಪಕ್ಷಿಗಳದ್ದಾಗಿದ್ದು, ಕಪ್ಪು-ಬಿಳಿ ಬಣ್ಣದ ಪುಕ್ಕಗಳು ಗುಬ್ಬಚ್ಚಿಗಳದ್ದು ಎಂದು ಹೇಳಿದರು. ನಮಗೆ ಇನ್ನೂ ಕುತೂಹಲ ಹೆಚ್ಚಾಯಿತು.

ಗೂಡಿನಲ್ಲಿ ಮರಿಗಳು ಇರಬಹುದಾ ಮಿಸ್?” ನನ್ನ ಪ್ರಶ್ನೆ.

ಯಾವ ಗೂಡು? ಇವು  ಎಲ್ಲಿ ಸಿಕ್ಕವು?” ಎಂದು ಮಿಸ್ ಕೇಳಿದರು.

ಬನ್ನಿ ತೋರಿಸ್ತಿವಿ.” ಎಂದು ಹೇಳುತ್ತ ಅವರನ್ನು ಪುಕ್ಕಗಳು ಹರಡಿದ್ದ ವರ್ಗಕ್ಕೆ ಕರೆದುಕೊಂಡು ಹೋದೆವು. ಆಗಾಗಲೇ ಎಲ್ಲ ಮಕ್ಕಳೂ ಕುತೂಹಲದಿಂದ ವರ್ಗದಲ್ಲಿ ಜಮಾಯಿಸಿದ್ದರು. ನವೀನ ಟೇಬಲ್ಲಿಟ್ಟು ಮೇಲೆ ಏರಿಯೇ ಬಿಟ್ಟ.

ನಿಧಾನ ನವೀನ. ಜಾಗರೂಕತೆಯಿಂದ ಗೂಡು ಕೆಳಗೆ ತೆಗೆದುಕೊ. ಅದರಲ್ಲಿ ಹಕ್ಕಿಗಳ ಮೊಟ್ಟೆಗಳಿರಬಹುದು.” ಎಂದರು ಮಿಸ್. ನವೀನ ಕಟ್ಟಿಗೆಯ ಹಲಿಗೆಯ ಮೇಲಿಂದ ಗೂಡನ್ನು ಕೆಳಗೆ ಇಳಿಸಿದ. ಅದರಲ್ಲಿ ಯಾವ ಮೊಟ್ಟೆಗಳೂ ಇರಲಿಲ್ಲ. ಅದು ಮೈನಾ ಪಕ್ಷಿಯ ಗೂಡು ಎಂದು ಮಿಸ್ ಹೇಳಿದರು. ಕಟ್ಟಿಗೆ, ಭತ್ತದ ಹುಲ್ಲಿನಿಂದ ಕಟ್ಟಿದ ಗೂಡು ಅದು. ಒಳಗೆ ಮೆತ್ತಗೆ ಹತ್ತಿಯನ್ನು ಇಡಲಾಗಿತ್ತು. ನನಗೆ ಅದೊಂದು ಸುಂದರ ಕಲಾಕೃತಿಯಂತೆ ತೋರಿತ್ತು. ಆದರೆ ಅದರಲ್ಲಿ ಯಾವುದೇ ಮೊಟ್ಟೆ, ಮರಿ ಇಲ್ಲದಿರುವುದು ಬೇಜಾರು ತಂದಿತ್ತು.

ಮಿಸ್ ಇದರಲ್ಲಿನ ಮೊಟ್ಟೆ, ಮರಿಗಳು ಎಲ್ಲಿ?” ನವೀನನ ಪ್ರಶ್ನೆ.

 

ಬಹುಶ ಮರಿಗಳು ದೊಡ್ಡದಾದ ನಂತರ ಹಾರಿ ಹೋಗಿರಬಹುದು. ವರ್ಗದಲ್ಲಿ ಪಾಠ ಮಡುವಾಗ ಇದರ ಬಗ್ಗೆ ಚರ್ಚಿಸೋಣ. ನಡೆಯಿರಿ ಇನ್ನು ಕೆಲಸ ತುಂಬಾ ಇದೆಎಂದರು ಮಿಸ್. ಎಲ್ಲರೂ ಮತ್ತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು. ಆದರೆ ನನಗೆ ಮಾತ್ರ ಕೆಲ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡವು.

ಶಾಲಾ ಪ್ರಾರಂಭೋತ್ಸವಕ್ಕಾಗಿ ಊರಿನಲ್ಲಿ ಪ್ರಭಾತಫೇರಿ ನಡೆಸಿದೆವು. ಶಾಲೆ ಅದೇ ತಾನೇ ಪ್ರಾರಂಭವಾಗಿದ್ದರಿಂದ ತರಗತಿಗಳಲ್ಲಿ ವಿಷಯಗಳ ಪೀರಿಡ್ ನಡೆಯಲಿಲ.್ಲ ವಿಜ್ಞಾನ ವಿಷಯದ ಇಂದಿರಾ ಮಿಸ್ ತುಂಬಾ ಸ್ಟ್ರಿಕ್ಟ್. ಅವರು ಹೊಸ ವರ್ಗಕ್ಕೆ ಕೊಂಡುಕೊಳ್ಳಬೇಕಾಗಿರುವ ನೋಟ್ಸ್ಗಳ ವಿವರವನ್ನು ಕರಿಹಲಗೆಯ ಮೇಲೆ ಬರೆಸಿ ವಿಷಯವನ್ನು ಪ್ರಾರಂಭಿಸಿದರು.

ಮದ್ಯಾಹ್ನ ಎಲ್ಲರೂ ಜೊತೆಗೂಡಿ ಊಟ ಮಾಡಿದೆವು. ಊಟದ ನಂತರ ಸ್ವಲ್ಪ ಹೊತ್ತು ಆಟ ಆಡಿದೆವು. ಕ್ಲಾಸಿಗೆ ಬಂದು ಕೆಲ ಹೊತ್ತು ಡ್ರಾಯಿಂಗ್ ಮಾಡಿದೆವು. ಶಾಲೆಯ ಗಂಟೆ ಬಾರಿಸಿತು. ಅಂದು ನಡೆದ ವಿಜ್ಞಾನ ವಿಷಯವನ್ನು ನೆನಸಿಕೊಳ್ಳುತ್ತಾ ಸೈಕಲ್ ಏರಿ ಗೆಳೆಯ, ಗೆಳತಿಯರಿಗೆ ಟಾಟಾ ಮಾಡಿ ಸೈಕಲ್ ತುಳಿಯುತ್ತಾ ಮನೆಗೆ ನಡೆದೆ.

ಆಕಾಶದಲ್ಲಿ ಎಲ್ಲೆಲ್ಲೂ ಮೋಡ ಆವರಿಸಿತ್ತು. ಅರ್ಧ ಕಿ.ಮೀ ದಷ್ಟು ಮನೆ ಕಡೆಗೆ ಸೈಕಲ್ ತುಳಿದಿದ್ದೆ. ಮೈನಾ ಗೂಡಿನ ಕುರಿತಾಗಿ ಯೋಚಿಸುತ್ತಾ ಸಾಗುತ್ತಿದ್ದೆ.  ಜೋರಾಗಿ ಮಳೆ ಸುರಿಯಲು ಪ್ರಾರಂಭವಾಯಿತು. ಮಳೆಯಲ್ಲಿ ನೆನೆಯುತ್ತಾ ಸೈಕಲ್ ತುಳಿಯುತ್ತಾ ಮನೆಗೆ ಬಂದೆ. ಮನೆಯ ಗೇಟು ತೆರೆಯಬೇಕು ಎನ್ನುವಷ್ಟರಲ್ಲಿ ಕಾಲಲ್ಲಿ ಒಂದು ಗುಬ್ಬಚ್ಚಿ!

ಅಯ್ಯೋ ಪಾಪ! ಗುಬ್ಬಚ್ಚಿ ಮಳೆಯಲಿ ತೊಯ್ದು ಒದ್ದೆಯಾಗಿದೆ’’ ಎಂದುಕೊಳ್ಳುತ್ತಾ  ಸೈಕಲ್ ನಿಲ್ಲಿಸಿ ನಿಧಾನವಾಗಿ ಗುಬ್ಬಚ್ಚಿಯನ್ನು ಕೈಯಲ್ಲಿ ಎತ್ತಿಕೊಂಡೆ. ಗುಬ್ಬಚ್ಚಿ ಗಡಗಡ ನಡುಗುತ್ತಿತ್ತು. ನಾನೂ ನಡುಗುತ್ತಿದ್ದೆ. ಶಬ್ದಮಾಡದೇ ಗೇಟು ತೆರೆದು ಗುಬ್ಬಚ್ಚಿ ಎತ್ತಿಕೊಂಡು ಒಳಗೆ ಬಂದೆ. ಗುಬ್ಬಚ್ಚಿ ಕಾಲಿನ ಹತ್ತಿರÀ ಏನೋ ಗಾಯದಂತಾಗಿ ಅದರ ಕಣ್ಣಲ್ಲಿ ನೀರು ಬರುತ್ತಿತ್ತು.

ಅದನ್ನು ಕಂಡ ನನಗೆಅಯ್ಯೋಪಾಪಎನ್ನಿಸಿತು. ನನ್ನ ಕಣ್ಣಲ್ಲಿ ನೀರು ಬಂತು. ಅಮ್ಮ ಇನ್ನೂ ಕದ ತೆರೆದಿರಲಿಲ್ಲ. ಕಡೆ ಕಡೆ ನೋಡಿದೆ. ಕಿಟಕಿಯ ಮೇಲಿನ ಸಜ್ಜಾ ಮೇಲೆ ಗುಬ್ಬಚ್ಚಿಯನ್ನು ನಿಧಾನವಾಗಿ ಇರಿಸಿದೆ. ಅಲ್ಲಿ ಮಳೆ ಹನಿ ಸಿಡಿಯುತ್ತಿರಲಿಲ್ಲ. ಅಷ್ಟರಲ್ಲಿ ಅಮ್ಮ  ಕದ ತೆರೆದರು.

``ನೇಹಾ ಒದ್ದೆಯಾಗಿ ಬಂದಿದ್ದೀಯಾ? ಮಳೆ ನಿಲ್ಲುವವರೆಗೆ ಅಲ್ಲೇ ಎಲ್ಲಿಯಾದ್ರೂ ನಿಲ್ಲೋಕಾಗಲ್ವಾ ನಿನಗೆ? ಮಳೆಯಲಿ ನೆನೆಯೋದಂದ್ರೆ ಎಷ್ಟು ಇಷ್ಟಾ ನೋಡು?’’ ಎಂದು ಬಯ್ಯುತ್ತಾ ಟಾವಲ್ ಹಿಡಿದು ಹೊರಬಂದರು. ನಾನು ಕಿಟಕಿಯ ಸಜ್ಜಾ ಮೇಲೆ ಗುಬ್ಬಚ್ಚಿ ಇರಿಸಿದ್ದು ಅವರಿಗೆ ಗೊತ್ತಾಗಿರಲಿಲ್ಲ. ಒಳಗೆ ಹೋಗಿ ಬಟ್ಟೆ ಬದಲಿಸಿದೆ. ಅಮ್ಮ ಬಿಸಿ ಬಿಸಿ ಹಾಲು ತಂದರು ಹಾಲು ಕುಡಿದೆ.

ನನ್ನ ಗಮನವೆಲ್ಲಾ ಗುಬ್ಬಚ್ಚಿ ಕಡೆಗೇ ಇತ್ತು. ಗುಬ್ಬಚ್ಚಿಗೆ ತಿನ್ನಲು ಏನು ಕೊಡಬೇಕು ಎಂದು ತಿಳಿಯಲಿಲ.್ಲ ಎಲ್ಲೋ ಪಾಠದಲ್ಲಿ ಓದಿದ ನೆನಪು. ಗುಬ್ಬಚ್ಚಿಗೆ ಚಿಕ್ಕ ಗಾತ್ರದ ಕಾಳುಗಳು, ಚಿಕ್ಕ ಕೀಟಗಳು ತುಂಬಾ ಇಷ್ಟ ಅಂತ. ಮನೆಯಲ್ಲಿ ಚಿಕ್ಕ ಗಾತ್ರದ ಕಾಳುಗಳಿಗಾಗಿ ಹುಡುಕಾಡಿದೆ. ಜೋಳ, ಗೋಧಿ, ರಾಗಿ ಏನೂ ಇರಲಿಲ್ಲ. ನಾವು ಅಂಗಡಿಯಲ್ಲೂ ಇವುಗಳನ್ನು ತರುವುದೂ ಇಲ್ಲ. ಪ್ಯಾಕೆಟ್ನಲ್ಲಿ ಹಿಟ್ಟನ್ನು ಮಾತ್ರ ತರುತ್ತೇವೆ. ನೇರವಾಗಿ ಅಡುಗೆ ಮನೆಗೆ ಹೋದೆ.  ಡಬ್ಬದಲ್ಲಿ ಅಕ್ಕಿಯನ್ನು ಕಂಡೆ. ಅಮ್ಮನಿಗೆ ಗೊತ್ತಾಗದ ಹಾಗೆ ಮುಷ್ಟಿಯಲ್ಲಿ ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಹೊರಬಂದು ಸಜ್ಜಾ ಮೇಲಿನ ಗುಬ್ಬಚ್ಚಿಗೆ ಹಾಕಿದೆ. ಗುಬ್ಬಚ್ಚಿ ಇನ್ನೂ ನಡುಗುತ್ತಿತ್ತು. ನನ್ನ ಬೆಡ್ರೂಂಗೆ ಬಂದು ನನ್ನ ಹಳೆಯ ಫ್ರಾಕ್ ಒಂದನ್ನು ಮತ್ತು ಡೆಟಾಲ್ ತೆಗೆದುಕೊಂಡು ಹೊರ ಬಂದೆ. ನಿಧಾನವಾಗಿ ಕಿಟಕಿ ಏರಿ ಸಜ್ಜಾ ಮೇಲೆ ನನ್ನ ಫ್ರಾಕ್ ಹಾಕಿ, ಗುಬ್ಬಚ್ಚಿ ಕಾಲಿಗೆ ಡೆಟಾಲ್ ಹಚ್ಚಿದೆ. ಗುಬ್ಬಚ್ಚಿ ಒಂದು ಕ್ಷಣ ವಿಲವಿಲ ಒದ್ದಾಡಿತು. ನನಗೆ ಗೊತ್ತಿರಲಿಲ್ಲ ನನಗೆ ನೋವಾದಾಗ ಅಮ್ಮ ಡೆಟಾಲ್ ಹಚ್ಚುತ್ತಾಳಲ್ಲ ಹಾಗೇ ನಾನೂ ಗುಬ್ಬಚ್ಚಿಗೆ ಹಚ್ಚಿದ್ದೆ. ಡೆಟಾಲ್ನಿಂದ ಉರಿ ಹೆಚ್ಚಾಗಿರಬಹುದು. ನಂತರ ಅದರ ಒದ್ದಾಟ ಕಡಿಮೆಯಾಯಿತು. ಉಸಿರಾಟ ದೀರ್ಘವಾಯಿತು. ಅದು ನನ್ನನ್ನೇ ನೋಡುತ್ತಿತ್ತು. ಅಮ್ಮ ನನ್ನನ್ನು ನೋಡುತ್ತಿಲ್ಲವೆಂದು ಖಾತ್ರಿ ಪಡಿಸಿಕೊಂಡೆ.

ಮನಸ್ಸಿಗೆ ಒಂದು ತರಹದ ಆನಂದ. ಸಾಯುವ ಸ್ಥಿತಿಯಲ್ಲಿದ್ದ ಗುಬ್ಬಚ್ಚಿಯನ್ನು ಉಳಿಸಿದ ಸಮಾಧಾನ. ಅಷ್ಟರಲ್ಲಿ ಅಪ್ಪ ಆಫೀಸಿನಿಂದ ಬಂದರು. ಅವರ ಜೊತೆ ಊಟ ಮಾಡಿದೆ. ಪ್ರಥಮ ದಿನದ ಶಾಲಾ ಅನುಭವವನ್ನು ಅವರು ಕೇಳಿದರು. ಗುಬ್ಬಚ್ಚಿ ಬಗ್ಗೆ ಅವರಿಗೂ ಏನೂ ಹೇಳಲಿಲ್ಲ. ಊಟ ಮಾಡಿ ನಿದ್ರೆ ಹೋದೆ. ಕನಸಿನಲ್ಲಿ ಗುಬ್ಬಚ್ಚಿ ಬಂದುಥ್ಯಾಂಕೂ ನೇಹಾಅಂತಾ ಹೇಳಿತ್ತು.

 

ರಾತ್ರಿಯೆಲ್ಲಾ ಗುಬ್ಬಚ್ಚಿಯದೇ ಕನಸು. ಬೆಳಗ್ಗೆ ಶುಭ್ರ ವಾತಾವರಣ. ಮಳೆ ಇರಲಿಲ್ಲ. ನಿಧಾನವಾಗಿ ಕಿಟಕಿಯಲ್ಲಿ ಇಣುಕಿ ನೋಡಿದೆ. ಗುಬ್ಬಚ್ಚಿ ನನ್ನ ಕಿಟಕಿಯ ಕಬ್ಬಿಣದ ಸರಳುಗಳ ಮೇಲೆ ಕೂತಿತ್ತು. ಪುಟ್ಟ ಪುಟ್ಟ ಕಣ್ಣುಗಳು ನನ್ನನ್ನೇ ಪಿಳುಕಿಸಿ ನೋಡುತ್ತಿದ್ದವು.

``ಗುಡ್ ಮಾರ್ನಿಂಗ್ ನೇಹಾ, ಥ್ಯಾಂಕ್ಸ ಲಾಟ್’’ ಎಂದಿತು ಗುಬ್ಬಚ್ಚಿ.

ನನಗೆ ಒಮ್ಮಿಂದಲೇ ಆಶ್ಚರ್ಯವಾಯಿತು. ``ಅರೆ, ಗುಬ್ಬಚ್ಚಿ ಮಾತನಾಡುತ್ತಿದೆ. ನನ್ನ ಹೆಸರೂ ಇದಕ್ಕೆ ಗೊತ್ತಿದೆಯಲ್ಲಾ?’’ ನಿಜಕ್ಕೂ ನನಗೆ ಆಶ್ಚರ್ಯವಾಗಿತ್ತು.

ಗುಬ್ಬಕ್ಕನನ್ನು ಕುರಿತು  ಕೇಳಿದೆ. ``ನಿನಗೆ ನನ್ನ ಹೆಸರು ಹೇಗೆ ಗೊತ್ತಾಯ್ತು?

``ಅಯ್ಯೋ, ಅಷ್ಟು ಗೊತ್ತಾಗದಿದ್ದರೆ ಹೇಗೆ? ನಾನು ನಿಮ್ಮ ಮನೆಯ ಮುಂದಿನ ಚೆರ್ರಿ ಮರದ ಮೇಲೆ ವಾಸವಾಗಿದ್ದೇನೆ. ದಿನಾಲೂ ನಿನ್ನನ್ನು ಗಮನಿಸುತ್ತೇನೆ. ನಿಮ್ಮ ಅಮ್ಮ ನಿನ್ನ ಹೆಸರನ್ನು ಕೂಗುತ್ತಾರಲ್ಲ? ಆಗ ಕೇಳಿಸಿಕೊಂಡಿದ್ದೇನೆ. ಅದಕ್ಕೆ ನಿನ್ನ ಹೆಸರು ನನಗೆ ಗೊತ್ತಿದೆ’’ ಎಂದಳು ಗುಬ್ಬಕ್ಕ.

ನನಗೆ ಸಂತೋಷದ ಜೊತೆ ಆಶ್ಚರ್ಯವೂ ಆಗಿತ್ತು. ಮಾತನಾಡುವ ಗುಬ್ಬಕ್ಕ! ನಾನು ಮೊದಲ ಬಾರಿ ನೋಡಿದ್ದೆ.

``ನೇಹಾ, ನಿನಗೆ ಧನ್ಯವಾದಗಳು. ನಿನ್ನೆ ದಿನ ನೀನು ನನ್ನ ಜೀವವನ್ನೂ ಉಳಿಸಿರುವೆ. ನನ್ನ ಕಾಲಿಗೆ ಔಷಧಿ ಹಚ್ಚಿರುವೆ. ಅದಕ್ಕೆ ಥ್ಯಾಂಕ್ಸ್ ಹೇಳೋಕೆ ಬಂದಿರುವೆ’’ ಎಂದಿತು ಗುಬ್ಬಕ್ಕ. “ಗುಬ್ಬಕ್ಕ ಮಳೆ ಬಂದಾಗಲೆಲ್ಲಾ ನೀನು ನಮ್ಮ ಕಿಟಕಿಯ ಸಜ್ಜಾ ಮೇಲೆ ಇರಬಹುದು’’ ಎಂದು ಹೇಳಿದೆ.

ಅಷ್ಟರಲ್ಲಿ ಅಡುಗೆ ಮನೆಯಿಂದ ಅಮ್ಮನ ಧ್ವನಿ ``ನೇಹಾ ಇನ್ನೂ ಎದ್ದಿಲ್ವಾ? ಯಾವಾಗ ಏಳ್ತಿಯಾ? ಶಾಲೆಗೆ ಹೋಗ್ತಿಯೋ ಇಲ್ವೋ ?’’ ಎಂದು ಕೂಗಿದರು.

``ಅಮ್ಮ ನೋಡಿದರೆ ಬಯ್ತಾರೆ’’ ಎನ್ನುತ್ತ ಗುಬ್ಬಕ್ಕ ಕಿಟಕಿಯ ಮೂಲಕ ಹೊರಗೆ ಹಾರಿತು.

ಶಾಲೆಗೆ ಹೋಗುವ ಸಮಯ. ನಾನು ಸ್ನಾನ ಮಾಡಿ ತಿಂಡಿ ತಿಂದು ಶಾಲೆಗೆ ಹೋಗಲು ತಯಾರಾಗಿದ್ದೆ. ಎಂದಿನಂತೆ ಅಮ್ಮ ಊಟದ ಡಬ್ಬ ಹಾಗೂ ನೀರಿನ ಬಾಟಲಿಯನ್ನು ರೆಡಿ ಮಾಡಿ ನನ್ನ ಕೈಯಲ್ಲಿ ಕೊಟ್ಟು ಮುತ್ತಿಕ್ಕಿ ಟಾಟಾ ಮಾಡಿದರು. ನಾನೂ ಕೂಡಾ ಟಾಟಾ ಮಾಡಿ, ಗೇಟು ತೆರೆದು ಹೊರ ಬಂದೆ. ಚೆರ್ರಿ ಮರದ ಮೇಲೆ ಕುಳಿತ ಗುಬ್ಬಕ್ಕ ಒಂದು ಸಾರಿ ಮೇಲೆ ಹಾರಿ ನನ್ನ ಗಮನ ಸೆಳೆದು, ಟಾಟಾ ಮಾಡಿ ನನ್ನನ್ನು ಬೀಳ್ಕೊಟ್ಟಿತು. ನಾನು ಆನಂದದಿಂದ ಸೈಕಲ್ ತುಳಿಯುತ್ತಾ ಶಾಲೆಗೆ ಹೋದೆ. ಮಿಸ್ ಹಕ್ಕಿಗಳ ಕುರಿತಾಗಿ ಪಾಠ ಆರಂಭಿಸಿದರು.

ಹಕ್ಕಿಗಳು ಹಾರುವ ಯಂತ್ರಗಳು. ಹಕ್ಕಿಗಳ ಪ್ರಮುಖ ಲಕ್ಷಣವೆಂದರೆ ಗರಿಗಳು. ಗರಿಗಳಿಲ್ಲದ ಹಕ್ಕಿಗಳೇ ಇಲ್ಲ.”

ಗರಿಗಳಿಂದ ಹಕ್ಕಿಗಳಿಗೆ ಏನು ಉಪಯೋಗ?” ಶ್ರೇಯಾ ಕೇಳಿದಳು.

ದೇಹದ ಹೊದಿಕೆಯಾಗಿ, ಶಾಖನಿಯಂತ್ರಕವಾದ ಗರಿಗಳು, ರೆಕ್ಕೆಗಲ ಅವಿಭಾಜ್ಯ ರಚನೆಗಳೂ ಹೌದು. ಹಕ್ಕಿ ಸಮೂಹಕ್ಕೆ ಬಣ್ಣ ವೈವಿಧ್ಯ ಗರಿಗಳಿಂದಲೇ. ಹಕ್ಕಿಗಳಿಗೆ ನಾಲ್ಕು ಕಾಲುಗಳು!”

ನಾಲ್ಕು ಕಾಲಾ ಮಿಸ್, ಎರಡೇ ಇವೆಯಲ್ಲನವೀನನ ಪ್ರಶ್ನೆ.

ಆದರೆ ಮುಂದಿನ ಎರಡು ಕಲುಗಳು ರೆಕ್ಕೆಗಳಾಗಿ ರೂಪಾಂತರಗೊಂಡಿವೆ. ಹಕ್ಕಿಯೊಂದರ ರೆಕ್ಕೆಗಳ ಆಕಾರ, ಗಾತ್ರ, ರಚನೆ ಅದರ ಹಾರಾಟದ ಸಾಮಥ್ರ್ಯವನ್ನು ಸೂಚಿಸುತ್ತವೆ. ಹಕ್ಕಿಗಳ ಇನ್ನೊಂದು ಗಮನಾರ್ಹ ಲಕ್ಷಣವೆಂದರೆ ಕೊಕ್ಕುಗಳು.”

ಕೊಕ್ಕುಗಳ ಕೆಲಸವೇನು ಮಿಸ್?” ನನ್ನ ಪ್ರಶ್ನೆ.

ಹಲ್ಲಿನ ಕೊರತೆಯನ್ನ ಕೊಕ್ಕು ನೀಗಿಸುತ್ತದೆ. ಕೊಕ್ಕು ಹಕ್ಕಿಗಳ ಆಹಾರಾಭ್ಯಾಸವನ್ನೂ ಸೂಚಿಸುತ್ತದೆ. ಗೂಡು ಕಟ್ಟುವ ಸಾಧನವಾಗಿ, ವೈರಿಗಳನ್ನು ಎದುರಿಸುವ ಅಸ್ತ್ರವಾಗಿ, ಮರಿಗಳಿಗೆ ಆಹಾರ ಉಣಿಸುವ ಚಮಚವಾಗಿ ಕೊಕ್ಕು ಉಪಯುಕ್ತ.”

ಹಕ್ಕಿಗಳು ಹಗುರವಾಗಿರಲು ಕಾರಣವೇನು?” ನನ್ನ ಪ್ರಶ್ನೆ

ಮೂಳೆಗಳು ತೆಳುವಾಗಿವೆ. ಅನೇಕ ಮೂಳೆಗಳು ಟೊಳ್ಳಾಗಿವೆ. ಒಂಭತ್ತು ಚೀಲಗಳು ಶ್ವಾಸಕೋಶಗಳಿಗೆ ಅಂಟಿಕೊಂಡಿವೆ. ರಕ್ತದ ಒತ್ತಡ, ಹೃದಯ ಬಡಿತ, ಶ್ವಾಸೋಚ್ಛಾಸ ಎಲ್ಲವೂ ಹಕ್ಕಿಗಳಲ್ಲಿ ಹೆಚ್ಚು. ಕಣ್ಣಗಳು ಕೂಡಾ ಅತೀ ಸೂಕ್ಷ್ಮ. ಏವಿಸ್ ವರ್ಗಕ್ಕೆ ಸೇರಿದ ಹಕ್ಕಿಗಳಲ್ಲಿ ಅನೇಕ ಉಪವರ್ಗಗಳಿವೆ. ಹಾರಲಾರದ ಪಕ್ಷಿಗಳಲ್ಲಿ ನಾಲ್ಕು ಗಣಗಳಿದ್ದರೆ, ಹಾರುವ ಪಕ್ಷಿಗಳಲ್ಲಿ ಇಪ್ಪತ್ತು ಗಣಗಳು ಹಾಗೂ 154 ಕುಟುಂಬಗಳಿವೆ.”

ಗುಬ್ಬಚ್ಚಿ ಯಾವ ಗಣಕ್ಕೆ ಸೇರುತ್ತದೆ?” ನವೀನ ಪ್ರಶ್ನಿಸಿದ.

ಗುಬ್ಬಚ್ಚಿ ಅಪೋಡಿಫಾರ್ಮಿಸ್ ಕುಟುಂಬಕ್ಕೆ ಸೇರಿದ್ದು, ಮೈನಾ ಪ್ಯಾಸರಿಫಾರ್ಮಿಸ್ ಪ್ರಭೇದಕ್ಕೆ ಸೇರಿದೆ.”

ಮಿಸ್ ಚಿತ್ರಗಳನ್ನು ತೋರಿಸುತ್ತ ವಿವರಿಸಿದ್ದರು.

 

ಅಂದು ನಾಲ್ಕು ಗಂಟೆಗೆ ಶಾಲೆ ಬಿಟ್ಟಿತ್ತು. ಅದಾಗಲೇ ಜಿಟಿ ಜಿಟಿ ಮಳೆ ಪ್ರಾರಂಭವಾಗಿತ್ತು. ಮತ್ತೆ ನನಗೆ ಗುಬ್ಬಕ್ಕನ ನೆನಪು. ಎಲ್ಲಿ ಗುಬ್ಬಕ್ಕ ಮಳೆಯಲ್ಲಿ ನೆನೆಯುತ್ತಾಳೋ ಎಂದುಕೊಂಡು ಜೋರಾಗಿ ಸೈಕಲ್ ತುಳಿಯುತ್ತಾ ಮನೆಗೆ ಬಂದೆ. ಮಳೆಗೆ ನೆನೆಯಬಾರದೆಂದು ಅಮ್ಮ ಬೆಳಿಗ್ಗೆ ಬ್ಯಾಗಿನಲ್ಲಿ ಜರ್ಕಿನ್ ಇಟ್ಟಿದ್ದರು. ಜರ್ಕಿನ್ ಹಾಕಿಕೊಂಡೇ ಸೈಕಲ್ ಏರಿದ್ದೆ. ಮನೆಗೆ ಬಂದವಳೇ ಗೇಟ್ ಒಳಗೆ ಸೈಕಲ್ ನಿಲ್ಲಿಸಿ ಚೆರ್ರಿ ಮರದಲ್ಲಿ ಗುಬ್ಬಕ್ಕಗಾಗಿ ಹುಡುಕಾಡಿದೆ. ಗುಬ್ಬಕ್ಕ ಅಲ್ಲಿ ಕಾಣಲಿಲ್ಲ. ನನಗೆ ಗಾಬರಿಯಾಯಿತು.

ಓಡಿ ಹೋಗಿ ಮನೆಯ ಒಳಗಡೆ ಸ್ಕೂಲ್ ಬ್ಯಾಗ್ ಇಟ್ಟು ಹೊರಗೆ ಕಿಟಕಿಯ ಬಳಿ ಬಂದೆ. ಗುಬ್ಬಕ್ಕ ಕಿಟಕಿಯ ಸಜ್ಜಾದಿಂದ ಹಾರಿ ಬಂದು ನನ್ನ ಭುಜದ ಮೇಲೆ ಕುಳಿತುಕೊಂಡಳು. ನಾನು ನಿಧಾನವಾಗಿ ಗುಬ್ಬಕ್ಕನನ್ನು ಕೈಯಲ್ಲಿ ಎತ್ತಿಕೊಂಡೆ. ರೇಷ್ಮೆಯಂತಹ ಅನುಭವ. ಬಾರಿ ಗುಬ್ಬಕ್ಕ ನೀರಿನಲ್ಲಿ ನೆನೆದಿರಲಿಲ್ಲ. ನಾನೂ ನೆನೆದಿರಲಿಲ್ಲ. ನನಗೆ ಖುಷಿಯೋ ಖುಷಿ. ಗುಬ್ಬಕ್ಕನನ್ನು ಸೂಕ್ಷ್ಮವಾಗಿ ಗಮನಿಸಿದೆ. ತಲೆ ಬೂದು ಬಣ್ಣ. ಕಣ್ಣ ಸುತ್ತಲೂ ಕಡು ಕಂದು. ಕೊರಳ ಹಿಂಭಾಗ, ಬೆನ್ನು ಭುಜಗಳ ಬಣ್ಣವೂ ಇದೇ. ರೆಕ್ಕೆಗಳು ಕಾಫಿ ಬಣ್ಣವುಳ್ಳ ಕಡು ಕಂದು. ಇವುಗಳಲ್ಲಿ ಎರಡು ಬಿಳಿ ಗೆರೆಗಳು. ಕೊಕ್ಕಿನಿಂದ ಕಣ್ಣಿನವರೆಗೆ ತೆಳುವಾದ ಕಪ್ಪು ಕಲೆ. ಗಡ್ಡದಿಂದ ಎದೆಯ ಮೇಲ್ಭಾಗದವರೆಗೆ ಅಗಲವಾದ ಕಪ್ಪು ಕಲೆ ಇದೆ. ದವಡೆಗಳೂ ಕೆಳಭಾಗದ ತುಪ್ಪಳವೂ ಬೂದಿ ಬಿಳಿ ಬಣ್ಣದವು. ಆರು ಅಂಗುಲ ಉದ್ದದ ಗುಬ್ಬಕ್ಕ ಹೆಣ್ಣೋ ಗಂಡೋ ನನಗೆ ಗೊತ್ತಾಗಲಿಲ್ಲ. ಆಗ ಗುಬ್ಬಕ್ಕನನ್ನೇ ಕೇಳಿದೆ. ಆಗ ಗುಬ್ಬಕ್ಕ ಹೆಣ್ಣು ಎಂದು ಉತ್ತರಿಸಿದಳು.

ಆಗ ನಾನುಹೆಣ್ಣಿಗೂ ಗಂಡಿಗೂ ವ್ಯತ್ಯಾಸ ಗುರುತಿಸುವುದು ಹೇಗೆ?” ಎಂದು ಕೇಳಿದೆ.

ಹೆಣ್ಣು ಹೆಚ್ಚು ಬಿಳಿಯಾಗಿದ್ದು ಅದರ ಮೇಲಿನ ತುಪ್ಪುಳು ಮಣ್ಣು ಕಂದು. ಕೆಳಗಿನ ತುಪ್ಪಳು ಬೂದಿ ಬಿಳಿಯಾಗಿರುತ್ತದೆ. ಗಂಡಿನ ತುಪ್ಪುಳು ಮಂದ ಬಿಳಿಯದ್ದಾಗಿರುತ್ತದೆಎಂದಳು ಗುಬ್ಬಕ್ಕ.

ಗುಬ್ಬಕ್ಕನನ್ನು ಅಲ್ಲೇ ಕಿಟಕಿಯ ಸರಳುಗಳ ಮೇಲೆ ಕುಳ್ಳಿರಿಸಿ ಓಡಿ ಅಡುಗೆ ಮನೆÀಗೆ ಹೋದೆ. ಅಮ್ಮ ಅಡುಗೆ ಮಾಡುತ್ತಿದ್ದರು. ನಿಧಾನವಾಗಿ ಅಮ್ಮನಿಗೆ ಗೊತ್ತಾಗದ ಹಾಗೆ ಡಬ್ಬದಲ್ಲಿನ ಕಡಲೆ ಕಾಳುಗಳನ್ನು ತೆಗೆದುಕೊಂಡು ಬಂದು ಗುಬ್ಬಕ್ಕನಿಗೆ ಹಾಕಿದೆ.

 ನನಗೆ ದೊಡ್ಡ ಕಾಳುಗಳನ್ನು ತಿನ್ನುವುದು ಕಷ್ಟಎಂದಳು ಗುಬ್ಬಕ್ಕ.

 ಏನು ಮಾಡ್ಲಿ ಗುಬ್ಬಕ್ಕ? ಜೋಳ, ಗೋಧಿ, ಸಜ್ಜೆ, ನವಣೆ, ರಾಗಿ ಹೀಗೆ ಯಾವ ಕಾಳುಗಳೂ ನಮ್ಮ ಮನೇಲಿ ಇಲ್ಲವಲ್ಲ? ಅಮ್ಮ ಇವುಗಳ ಹಿಟ್ಟಿನ ಪ್ಯಾಕೆಟ್ ಮಾತ್ರ ತರುತ್ತಾರೆ.

ದಿನಗಳಲ್ಲಿ ನಮಗೆ ಆಹಾರವೇ ಸಿಗದಾಗಿದೆ. ಹಿಂದಿನ ಕಾಲಗಳಲ್ಲಿ ಕಾಳುಗಳನ್ನು ಒಕ್ಕುವುದು, ರಾಶಿ ಮಾಡುವುದು, ಸ್ವಚ್ಛಗೊಳಿಸುವುದು, ಒಣಗಿಸುವುದು, ಕುಟ್ಟುವುದು, ತೂರುವುದು, ಬೀಸುವುದು ಇತ್ಯಾದಿ ಚಟುವಟಿಕೆಗಳು ನಡೆದು ಅಲ್ಲಿ ಇಲ್ಲಿ ಬಿದ್ದ ಕಾಳುಗಳು ನಮಗೆ ಆಹಾರವಾಗಿ ಸಿಗುತ್ತಿದ್ದವು. ಆದರೆ ಈಗಿನ ಯಂತ್ರಯುಗ ನಮಗೆ ಆಹಾರವೇ ಸಿಗದಂತೆ ಮಾಡಿದೆಎಂದು ಗುಬ್ಬಕ್ಕ ವಿಷಾದದಿಂದ ಹೇಳುತ್ತ ನನ್ನ ಕೈ ಮೇಲೆ ಕುಳಿತು,  ಕಡಲೆ ಕಾಳುಗಳನ್ನು ಆಯ್ದುಕೊಂಡು ತಿಂದಿತು.

ಗುಬ್ಬಕ್ಕನ ಕಣ್ಣುಗಳಲ್ಲಿ ಅಷ್ಟೇನೂ ಸಂತಸ ಇರಲಿಲ್ಲ. ನನಗೆ ಗುಬ್ಬಚ್ಚಿಯ ಮಾತಿನಲ್ಲಿ ಸತ್ಯ ಕಾಣುತ್ತಿತ್ತು. ಕೆಲವು ದಿನಗಳವರೆಗೆ ನಮ್ಮ ಸ್ನೇಹ ಹೀಗೆ ಬೆಳೆಯುತ್ತಾ ಸಾಗಿತು. ಗುಬ್ಬಕ್ಕ ಪ್ರತಿದಿನ ನನ್ನ ಜೊತೆ ಮಾತನಾಡುತ್ತಿತ್ತು. ನಾನೂ ಅದರೊಂದಿಗೆ ದಿನಾಲೂ ಮಾತನಾಡಲು ಹಾತೊರೆಯುತ್ತಿದ್ದೆ.

No comments:

Post a Comment