Tuesday, 31 March 2020

ಬಾಲಕಾರ್ಮಿಕತೆ, ಯಾವುದು ಸತ್ಯ? ಯಾವುದು ಮಿಥ್ಯ?


ಬಾಲಕಾರ್ಮಿಕತೆ, ಯಾವುದು ಸತ್ಯ? ಯಾವುದು ಮಿಥ್ಯ?

ಲೇಖನ: ಡಾ.ಲಿಂಗರಾಜ ರಾಮಾಪೂರ

----------------------------------------------------------------

ನಾವು ಉಪಯೋಗಿಸುವ ಬಟ್ಟೆಗಳು, ಆಭರಣಗಳು, ಅಲಂಕಾರಿಕ ವಸ್ತುಗಳು, ಟೀ ಮುಂತಾದವುಗಳನ್ನು ಹೆಚ್ಚಾಗಿ ಬಾಲಕಾರ್ಮಿಕರನ್ನೊಳಗೊಂಡು ತಯಾರಿಸಲ್ಪಟ್ಟ ವಸ್ತುಗಳಾಗಿವೆ. ಇಲ್ಲಿ 5 ವರ್ಷದಷ್ಟು ಕಡಿಮೆ ಪ್ರಾಯದ ಮಕ್ಕಳು ಇಡೀ ದಿವಸ ಅಪಾಯಕಾರಿ ಪರಿಸ್ಥಿತಿಯಲ್ಲಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿ ಕಡಿಮೆ ಸಂಬಳದ ಮೇಲೆ ರಕ್ತ ಸುರಿಸಿ ದುಡಿಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ತಮ್ಮ ಕೆಲಸಕ್ಕೆ ದಾಸರಾಗಿದ್ದು, ಗುಲಾಮರಾಗಿ, ಜೀತದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬಿಡುಗಡೆ ಅಥವಾ ಸ್ವಾತಂತ್ರ್ಯ ಕನಸಿನ ಗಂಟು.

                ಪ್ರಪಂಚದಾದ್ಯಂತ ಸುಮಾರು 211 ಮಿಲಿಯನ್ 6-14 ವರ್ಷದ ಮಕ್ಕಳು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರಬಹುದು ಎಂದು ಅಂದಾಜಿಸಲಾಗಿದೆ. 5-17 ವರ್ಷದ ಪ್ರಾಯದ ಮಕ್ಕಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಸುಮಾರು 352 ಮಿಲಿಯನ್ ಎಂದು ಅಂದಾಜಿಸಲಾಗಿದೆ.

                ಭಾರತದಲ್ಲಿ ಮಕ್ಕಳ ಸಂಖ್ಯೆ 398 ಮಿಲಿಯನ್ ಎಂದು ಅಂದಾಜಿಸಿದ್ದು ಅವರಲ್ಲಿ 203 ಮಿಲಿಯನ್ 5-14 ವರ್ಷ ವಯೋಮಿತಿಯವರು. ಇವರಲ್ಲಿ 116 ಮಿಲಿಯನ್ ಶಾಲೆಯಲ್ಲಿ ಇದ್ದಾರೆ. 12.6 ಮಿಲಿಯನ್ ಮಕ್ಕಳು ಪೂರ್ಣಾವಧಿಯ ಕೆಲಸಗಳಲ್ಲಿ ಇದ್ದಾರೆ. ಉಳಿದ 74 ಮಿಲಿಯನ್ ಮಕ್ಕಳ ಸ್ಥಿತಿಗತಿ ತಿಳಿದಿಲ್ಲ. ಇವರು ಕುಟುಂಬದ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರಬಹುದು ಅಥವಾ ತಮ್ಮ ಪೋಷಕರ ಜೊತೆಯಲ್ಲಿ, ಮನೆಗೆಲಸದವರಾಗಿ, ಜೀತದಾಳಾಗಿ ಅಥವಾ ಯಾವುದೇ ಕೆಲಸ ಮಾಡಿಕೊಂಡಿರಬಹುದು.

                ಬಾಲಕಾರ್ಮಿಕತೆಗೆ ಹಲವಾರು ಕಾರಣಗಳು ಇದ್ದರೂ ಅದರ ಬಗ್ಗೆ ಪ್ರಚಲಿತದಲ್ಲಿರುವ ಹಲವು ಕಟ್ಟುಕಥೆಗಳು, ಮಿಥ್ಯಗಳು ಹೀಗಿವೆ.

             ಬಡತನವು ಬಾಲಕಾರ್ಮಿಕತೆಗೆ ಮುಖ್ಯ ಕಾರಣ.

ಬಡತನಕ್ಕೆ ಹಲವು ಆಯಾಮಗಳು ಮತ್ತು ಮುಖಗಳಿವೆ. ಕಡಿಮೆ ಸಂಪಾದನೆ, ಕಡಿಮೆ ಮಟ್ಟದ ಕೌಶಲ್ಯ ಮತ್ತು ಶಿಕ್ಷಣ, ಆಸ್ತಿ ಇಲ್ಲದೇ ಇರುವುದು. ತರಬೇತಿ ಮತ್ತು ಶಿಕ್ಷಣಕ್ಕೆ ಆಸ್ಪದ ಇಲ್ಲದಿರುವುದು. ಅನಾರೋಗ್ಯ, ಸರಿಯಾದ ಆಹಾರ ಮತ್ತು ಸೂರು ಇಲ್ಲದಿರುವುದು. ಆದರೆ ಇವು ಮುಖ್ಯ ಕಾರಣಗಳಲ್ಲ. ಪೋóಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂಬ ಮನಸ್ಸು ಇದ್ದರೆ ಬಡತನ ಅಡ್ಡಿ ಆಗುವುದಿಲ್ಲ. ಅವರಿಗೆ ಕಷ್ಟವಾಗುವುದು ಆದರೆ ಅಸಾಧ್ಯವಾದುದಲ್ಲ.

             ಮಕ್ಕಳು ಕೆಲಸ ಮಾಡದಿದ್ದರೆ ಅವರು ಮತ್ತು ಅವರ ಕುಟುಂಬಗಳು ಉಪವಾಸ ಇರಬೇಕಾಗುವುದು.

ಕುಟುಂಬದ ಎಲ್ಲಾ ಸದಸ್ಯರು ಮತ್ತು ಮಕ್ಕಳು ಕೆಲಸ ಮಾಡಿ ಸಹ ಉಪವಾಸ ಇರಬೇಕಾದ ಸಂಭವ ಇರುತ್ತದೆ. ಆಹಾರದ ಲಭ್ಯತೆ ಹಲವಾರು ವಿಚಾರಗಳ ಮೇಲೆ ಅವಲಂಬಿತವಾಗಿದೆ. ಉಪವಾಸ ಅಥವಾ ಆಹಾರದ ಅಲಭ್ಯತೆಯ ಹಲವಾರು ವಿಚಾರಗಳ ಮೇಲೆ ಅವಲಂಬಿತವಾಗಿದೆ. ಉಪವಾಸ ಅಥವಾ ಆಹಾರದ ಅಲಭ್ಯತೆಯ ಹಲವಾರು ವಿಷಯಗಳ ಸಮ್ಮಿಶ್ರವಾಗಿಯೇ ಅದು ಆಹಾರದ ಬೆಲೆ, ಜನರ ಆದಾಯ, ಕೊಳ್ಳುವ ಶಕ್ತಿ, ಆಹಾರದ ಲಭ್ಯತೆ, ಆಹಾರಕ್ಕೆ ಸಂಪರ್ಕ ಇತ್ಯಾದಿ ಅವಲಂಬಿಸಿದೆ.

             ಬಡಜನರಿಗೆ ಹೆಚ್ಚು ಮಕ್ಕಳು ಇರುವುದು ಬಾಲಕರ್ಮಿಕತೆಗೆ ಕಾರಣ.

ಇದು ಸರಿಯಾದ ಮಾಹಿತಿ ಅಲ್ಲ. ದೇಶದ ಸಂಪತ್ತು ಅದರ ಜನಸಂಖ್ಯೆ, ಜನರಿಗೆ ಸರಿಯಾದ ಶಿಕ್ಷಣ ಕೊಟ್ಟು ಮತ್ತು ಅಭಿವೃದ್ಧಿ ಪಥ ತೋರಿಸಿದರೆ ಬಡಜನರ ಅಭಿವೃದ್ಧಿ ಸಾಧ್ಯ. ಅದರಿಂದ ದೇಶದ ಸಂಪತ್ತು ಹೆಚ್ಚಾಗುತ್ತದೆ. ನಾವು ಹೆಚ್ಚಾಗಿ ಸಂಖ್ಯೆಯನ್ನು ಗಮನಿಸುತ್ತೇವೆ ಆದರೆ ಸಂಖ್ಯೆಯಲ್ಲಿ ಇರುವ ಶಕ್ತಿಯನ್ನು ಗಮನಿಸುವುದಿಲ್ಲ.

             ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಿಂತ ಕೆಲಸಕ್ಕೆ ಕಳುಹಿಸಲು ಇಷ್ಟಪಡುತ್ತಾರೆ.

ಇದು ತಪ್ಪು ಅಭಿಪ್ರಾಯ. ಸರ್ಕಾರೇತರ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಕೆಲಸದಿಂದ ಬಿಡಿಸಿ ಶಾಲೆಗೆ ಸೇರಿಸಿರುವುದು ಇದಕ್ಕೆ ಸಾಕ್ಷಿ. ಸಾಮಾಜಿಕ ವ್ಯವಸ್ಥೆಯು ಪೋಷಕರು ಅವರ ಮಕ್ಕಳನ್ನು ಬಾಲಕಾರ್ಮಿಕತೆಗೆ ದೂಡುವಂತೆ ಪ್ರೋತ್ಸಾಹಿಸುತ್ತದೆ.

             ಮಕ್ಕಳಿಗೆ ಕೆಲಸ ಮಾಡಲು ಆಸೆ ಇದೆ.

ಮಕ್ಕಳು ಕೆಲವೊಮ್ಮೆ ತಮಗೆ ಕೆಲಸ ಮಾಡಲು ಆಸಕ್ತಿ ಇದೆ ಎಂದು ತಿಳಿಸಬಹುದು. ಆದರೆ ಅವರಿಗೆ ಅದರ ಬದಲಿನ ಅವಕಾಶ ಗೊತ್ತಿಲ್ಲದೆ ಇರುವುದರಿಂದ ಅವರು ಕೆಲಸ ಮಾಡುತ್ತೇವೆಂಬುದಾಗಿ ಹೇಳುತ್ತಾರೆ. ಶಿಕ್ಷಣಕ್ಕೆ ಅವರಿಗೆ ಆಸ್ಪದ ಇಲ್ಲದೇ ಇರುವುದರಿಂದ ಶಾಲೆಯ ಪಾಠ ಪ್ರವಚನಗಳು ಅವರಿಗೆ ಆಸಕ್ತಿ ಮೂಡಿಸದೇ ಇರುವುದರಿಂದ ಹಾಗೂ ಶಾಲಾ ಶಿಕ್ಷಕರು ಕೆಲವೊಮ್ಮೆ ಇವರನ್ನು ಕಠೋರವಾಗಿ ನಡೆಸುವುದರಿಂದ ಮಕ್ಕಳ ಕೆಲಸ ಮಾಡಲು ಹೋಗುತ್ತಾರೆ.

             ಮಕ್ಕಳನ್ನು ಅಪಾಯಕಾರಿ ಅಲ್ಲದ ಕೆಲಸಗಳಲ್ಲಿ ತೊಡಗಿಸುವುದರಿಂದ ಯಾವುದೇ ತಪ್ಪಿಲ್ಲ.

ಅಪಾಯಕಾರಿ ಎಂಬುದು ಚರ್ಚೆ ಮಾಡುವಂತಹ ವಿಚಾರ. ಯಾವುದೇ ಕೆಲಸವನ್ನು ಅನಾರೋಗ್ಯಕರ ಸನ್ನಿವೇಶದಲ್ಲಿ ಅಥವಾ ಹೆಚ್ಚು ಹೊತ್ತಿನವರೆಗೆ ಮಾಡಿದರೆ ಅದು ಅಪಾಯಕಾರಿಯಾಗಬಹುದು. ಮಕ್ಕಳಿಗೆ ಅವರ ಅಭಿವೃದ್ಧಿ, ಶಿಕ್ಷಣ. ಮನೋರಂಜನೆ, ವೈದ್ಯಕೀಯ ಸೌಲಭ್ಯ, ಆಟ ಇತ್ಯಾದಿಗಳಿಂದ ವಂಚಿತರನ್ನಾಗಿ ಮಾಡುವುದೂ ಕೂಡ ಅಪಾಯಕಾರಿ.

             ಮಕ್ಕಳು ಕೆಲಸ ಮಾಡಿದರೆ ಅವರ ಕೌಶಲ್ಯ ಅಭಿವೃದ್ಧಿಯಾಗುತ್ತದೆ.

ಮಕ್ಕಳಿಗೆ ಕೊಡುವ ಕೆಲಸಗಳು ಸರಳ ಮತ್ತು ಪುನರಾವರ್ತನೆ ಆಗಿರುತ್ತದೆ. ಇದರಲ್ಲಿ ಯಾವುದೇ ಕೌಶಲ್ಯ ಇರುವುದಿಲ್ಲ. ಮಕ್ಕಳು ಕೆಲಸವನ್ನು ಬಹಳ ಹೊತ್ತಿನವರೆಗೆ ಅನಾರೋಗ್ಯಕರ ಸನ್ನಿವೇಶದಲ್ಲಿ ಮಾಡುತ್ತಾರೆ. ಕಷ್ಟಕರವಾದ ಭೌತಿಕ ಕೆಲಸ, ಧೂಳು, ಬೆಂಕಿ, ರಾಸಾಯನಿಕ ವಸ್ತುಗಳ ಸಂಪರ್ಕದಿಂದ ಮಕ್ಕಳ ಆರೋಗ್ಯ ಕೆಡುವುದೇ ಹೆಚ್ಚು.

             ಸಾಂಪ್ರದಾಯಿಕ ಕಲೆ ಮತ್ತು ಕಸುಬನ್ನು ಕಾಪಾಡಲು ಮಕ್ಕಳು ಕೆಲಸ ಮಾಡಬೇಕು.

ಮಕ್ಕಳಿಗೆ ಅಂದರೆ ಬಾಲಕಾರ್ಮಿಕರಿಗೆ ಯಾರೂ ನಿಜವಾದ ಕಲೆ ಅಥವಾ ಕುಶಲ ಕೆಲಸವನ್ನು ಕಲಿಸಿ ಕೊಡುವುದಿಲ್ಲ. ಒಂದು ವೇಳೆ ಕುಟುಂಬದ ಕಲೆಗಳನ್ನು ಮಕ್ಕಳು ಕಲಿಯುವುದಿದ್ದರೆ ಅದು ಶಿಕ್ಷಣದ ಜೊತೆ ಆಗಬೇಕು.

             ಮಕ್ಕಳು ವೇಗವಾಗಿ ಕೆಲಸ ಮಾಡುತ್ತಾರೆ. ಅವರ ಪುಟ್ಟ ಕೈಗಳು ನಾಜೂಕು ಆದ ಕೆಲಸ ಮಾಡಲು ಅವಶ್ಯಕ.

ಮಕ್ಕಳು ದೊಡ್ಡವರಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬುದು ತಪ್ಪು ಕಲ್ಪನೆ. ಮಕ್ಕಳು ಯಾವುದೇ ಕಲ್ಪನೆಯಿಲ್ಲದೇ ಹೇಳಿಕೊಟ್ಟಿದ್ದನ್ನು ಮಾತ್ರ ಮಾಡಬಲ್ಲರು.

             ಮಕ್ಕಳು ಕೆಲಸ ಮಾಡದೇ ಇದ್ದರೆ, ಕೈಗಾರಿಕೆ ಬಿದ್ದು ಹೋಗುತ್ತದೆ.

ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಆಗುವ ವೆಚ್ಚದ ಹೆಚ್ಚಳ ಬಹಳ ಕಡಿಮೆ. ಇದನ್ನು ಕೈಗಾರಿಕೆ ಭರಿಸಲು ಆಸ್ಪದ ಇದೆ. ಅವರಿಗೆ ಲಾಭ ಸ್ವಲ್ಪ ಕಡಿಮೆ ಆಗಬಹುದು.

             ಬಾಲಕಾರ್ಮಿಕತೆಯನ್ನು ನಿರ್ಮೂಲನೆ ಮಾಡಲು ಬಾಲಕಾರ್ಮಿಕತೆ ನಿಷೇಧ ಕಾನೂನುಗಳು ಸಾಕು.

ಬಾಲಕಾರ್ಮಿಕತೆಯ ನಿಷೇಧದ ಬಗ್ಗೆ ಕಾನೂನುಗಳು ಸಮಸ್ಯೆಗಳನ್ನು ಸಂಕೀರ್ಣಗೊಳಿಸಿ ಬಾಲಕಾರ್ಮಿಕತೆಯನ್ನು ಕಾನೂನುಬದ್ಧಗೊಳಿಸುವ ಸಂಭವ ಇದೆ. ಹಲವಾರು ಕಾನೂನುಗಳನ್ನು ಜಾರಿಗೊಳಿಸಿ ಅದನ್ನು ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳದೇ ಹೋದರೆ ಏನೂ ಲಾಭವಾಗುವುದಿಲ್ಲ.

             ಬಾಲಕಾರ್ಮಿಕತೆಯನ್ನು ತೊಡೆದು ಹಾಕಲು ಸಾಧ್ಯವಿಲ್ಲ.

ಬಗ್ಗೆ ಇರುವ ಕೆಲಸ ದೊಡ್ಡದು. ಆದರೆ ಸಾಧಿಸಲಾಗದ ಕಾರ್ಯವಲ್ಲ. ಇದು ಬೃಹತ್ ಕೆಲಸ ಅಥವಾ ಹೊರೆಯ ಕೆಲಸವಲ್ಲ. ಸಮಸ್ಯೆಯ ನಿವಾರಣೆಗೆ ಸಂಪನ್ಮೂಲದ ಕೊರತೆ ಅಲ್ಲ. ಆದರೆ ಕೊರತೆ ಇರುವುದು ನಿಜವಾದ ಆಸಕ್ತಿ ಮತ್ತು ರಾಜಕೀಯ ಇಚ್ಛಾಶಕ್ತಿ.

ಕೊನೆಯ ಮಾತು

                ಬಾಲಕಾರ್ಮಿಕತೆಯ ನಿರ್ಮೂಲನೆ ಯಾಂತ್ರಿಕ ಕ್ರಿಯೆಯಲ್ಲ. ಯಾಂತ್ರಿಕ ಕ್ರಿಯೆಯಾದರೆ ಸಾಧಿಸುವುದು ಸುಲಭ. ಆದರೆ ಇದು ಮಾನವರು ಮತ್ತು ಮಾನವರ ಯೋಜನೆಗೆ ಸಂಬಂಧಿಸಿದ್ದು. ಮಕ್ಕಳನ್ನು ನಾವು ಮನುಷ್ಯರನ್ನಾಗಿ ಕಾಣಬೇಕು. ಮಕ್ಕಳ ಹಕ್ಕುಗಳನ್ನು ಗುರುತಿಸುವ ಕಾಲ ಈಗ ಕೂಡಿಬಂದಿದೆ.

 

No comments:

Post a Comment