Tuesday, 20 October 2020
ವಿಜ್ಞಾನ ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವದ ಪಾತ್ರ
ಲೇಖನ: ಡಾ.ಲಿಂಗರಾಜ ರಾಮಾಪೂರ
ಶಿಕ್ಷಕ ಸಾಹಿತಿಗಳು
ಸರಕಾರಿ ಪ್ರೌಢಶಾಲೆ, ಕಿರೇಸೂರ. ತಾ.ಹುಬ್ಬಳ್ಳಿ
ಮೊ:9964571330
ಪ್ರಕೃತಿಯ ಘಟನೆಗಳನ್ನು ತಾರ್ಕಿಕವಾಗಿ ಅರ್ಥಮಾಡಿಕೊಳ್ಳುವುದೇ ವಿಜ್ಞಾನದ ಉದ್ದೇಶ. ವಿಜ್ಞಾನ ಅಂದರೆ ಸತ್ಯಾನ್ವೇಷಣೆ. ಇಂತಹ ತಿಳುವಳಿಕೆ ಶತಮಾನಗಳ ಹಿಂದೆಯೇ ಮೊದಲಾಗಿ ಈಗ ಹೆಚ್ಚು ವ್ಯವಸ್ಥಿತವಾಗಿ ಬೆಳೆದುಕೊಂಡು ಬಂದಿದೆ. ಈ ಶತಮಾನದಲ್ಲಿ ವಿಜ್ಞಾನ ನಾಗಾಲೋಟದಿಂದ ಸಾಗುತ್ತಿದೆ. ತಂತ್ರಜ್ಞಾನವೂ ಅಷ್ಟೇ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳು ಜನಜೀವನದ ಹಾಸು ಹೊಕ್ಕಾಗಿವೆ. ಇವುಗಳಿಲ್ಲದೇ ಜೀವನ ನಡೆಸುವುದು ಸಾಧ್ಯವಿಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನದ ಬೋಧನೆ ಪ್ರಧಾನ ಸ್ಥಾನವನ್ನು ಪಡೆದಿದೆ. ಪ್ರಾಥಮಿಕ ಹಂತದ ಮೂರನೆಯ ತರಗತಿಯಿಂದಲೇ ವಿಜ್ಞಾನ ವಿಷಯಗಳ ಪ್ರಸ್ತಾಪ, ಬೋಧನೆ ಮಾಡಲಾಗುತ್ತಿದೆ. ಏಳನೆಯ ತರಗತಿ ಮುಗಿಯುವ ತನಕ ವಾರಕ್ಕೆ ಆರೇಳು ಪೀರಿಯಡ್ ಗಳಂತೆ ವಿಜ್ಞಾನದ ಪಾಠ ಪ್ರವಚನ ಸಾಗುತ್ತಿದೆ. ಅಂತೆಯೇ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಾಕಷ್ಟು ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಶಿಕ್ಷಣ ಪದ್ಧತಿಯ ಅಂಗವಾಗಿ ವ್ಯವಸ್ಥಿತವಾಗಿ ಕಲಿಯುತ್ತಾರೆ. ಎಲ್ಲ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ವಿಜ್ಞಾನ ಮತ್ತು ಗಣಿತ ಕಲಿಕೆ ಕಡ್ಡಾಯ. ಈ ವಿದ್ಯಾರ್ಥಿಗಳು ವಾರಕ್ಕೆ ಒಟ್ಟು ಹನ್ನೆರಡು ಪೀರಿಯಡ್ಗಳಂತೆ ಈ ವಿಷಯವನ್ನು ಮೂರು ವರ್ಷ ಕಲಿಯುತ್ತಾರೆ. ಅಂದರೆ ಹತ್ತನೇ ತರಗತಿ ಮುಗಿಸುವ ಎಲ್ಲಾ ವಿದ್ಯಾರ್ಥಿಗಳೂ ಎಂಟು ವರ್ಷ ಕಾಲ ವಿಜ್ಞಾನ ಕಲಿಕೆಯಲ್ಲಿ ತೊಡಗುತ್ತಾರೆ. ಪ್ರಿಯೂನಿವರ್ಸಿಟಿ ಹಂತದಲ್ಲಿ ವಿಜ್ಞಾನದ ವಿಷಯಗಳು ಐಚ್ಛಿಕ. ಮುಂದೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತಶಾಸ್ತ್ರಗಳಾಗಿ ವಿಜ್ಞಾನವನ್ನು ವಿದ್ಯಾರ್ಥಿಗಳು ಅಭ್ಯಸಿಸುತ್ತಾರೆ. ಎಲ್ಲ ವಿದ್ಯಾವಂತರಿಗೂ ವಿಜ್ಞಾನ ವಿಷಯಗಳ ಪರಿಚಯವಾಗಿರುತ್ತದೆ. ಆದರೆ ಎಷ್ಟರ ಮಟ್ಟಿಗೆ ವೈಜ್ಞಾನಿಕ ಮನೋಭಾವ ಹೊಂದಿದ್ದಾರೆ ಎಂಬುವುದನ್ನು ನಿಖರವಾಗಿ ಅಳೆಯಲು ಸಾಧ್ಯವಿಲ್ಲ.
ವಿಜ್ಞಾನವೇ ಬೇರೆ. ವೈಜ್ಞಾನಿಕ ಮನೋಭಾವವೇ ಬೇರೆ. ಎರಡನ್ನೂ ಒಂದೇ ಅರ್ಥದಲ್ಲಿ ನೋಡಲು ಸಾಧ್ಯವಿಲ್ಲ. ವಿಜ್ಞಾನಕ್ಕೂ ವೈಜ್ಞಾನಿಕ ಮನೋಭಾವಕ್ಕೂ ಹಲವು ವಿಶೇಷವಾದ ಲಕ್ಷಣಗಳಿವೆ. ವೈಜ್ಞಾನಿಕ ಮನೋಭಾವದಿಂದ ಕೂಡಿರುವವನು ಯಾವುದನ್ನೂ ಯಾಂತ್ರಿಕವಾಗಿ ಒಪ್ಪುವುದಿಲ್ಲ. ಪ್ರತಿಯೊಂದನ್ನೂ ಪ್ರಶ್ನಿಸಿ, ಪರೀಕ್ಷಿಸಿ, ತಾಳೆನೋಡಿ ವಿಷಯದ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯತ್ನಿಸುತ್ತಾನೆ. ಇಂತಹವನು ವಿಷಯದ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯತ್ನಿಸುತ್ತಾನೆ. ಇಂತಹ ಮನೋಭಾವದ ಮೇಲೆ ರೂಪುಗೊಂಡ ಅಭಿಪ್ರಾಯಗಳು, ನಿಯಮಗಳು ತಾತ್ಕಾಲಿಕ. ಆಗಿನ ಕಾಲಕ್ಕೆ ಅವು ಸತ್ಯ. ಹೊಸ ಅಂಕಿ ಅಂಶಗಳು, ಸಂಶೋಧನೆ, ಮಾಹಿತಿ ಅನುಭವದ ಆಧಾರದ ಮೇಲೆ ಈ ನಿಯಮಗಳು ಬದಲಾಗಬಹುದು. ಇಂತಹ ಬದಲಾವಣೆಗಳನ್ನು ವೈಜ್ಞಾನಿಕ ಮನೋಭಾವ ಹೊಂದಿದವನು ಸಲೀಸಾಗಿ, ಸಂತೋಷದಿಂದ ಒಪ್ಪುತ್ತಾನೆ.
ಭಾರತ ಸಂವಿಧಾನದಲ್ಲಿ ಪ್ರಜೆಗಳ ಮೂಲ ಕರ್ತವ್ಯಗಳು ಎಂಬ ಒಂದು ಮುಖ್ಯವಾದ ಅಧ್ಯಾಯವಿದೆ. ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಆ ಮೂಲ ಕರ್ತವ್ಯಗಳನ್ನು ಕಾರ್ಯಗತ ಮಾಡಬೇಕೆಂಬ ಆದೇಶವಿದೆ. ಈ ಹತ್ತು ಮೂಲ ಕರ್ತವ್ಯಗಳಲ್ಲಿ ಒಂದು ಈ ರೀತಿಯಾಗಿದೆ. “ವೈಜ್ಞಾನಿಕ ಮನೋಭಾವ ಮಾನವೀಯತೆ, ವೈಚಾರಿಕತೆ ಮತ್ತು ಸುಧಾರಣ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕಾದದ್ದೂ ಪ್ರತಿಯೊಬ್ಬ ಪ್ರಜೆಯ ಮೂಲ ಕರ್ತವ್ಯ” ಅಂದಮೇಲೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದಕ್ಕೆ ಸಂವಿಧಾನದ ಸಂಪೂರ್ಣ ಬೆಂಬಲವಿದೆ.
ಶಿಕ್ಷಣದ ಉದ್ದೇಶ ಬರೀ ಸಾಕ್ಷರತೆ ಅಲ್ಲ. ಜನರ ಜೀವನವನ್ನು ಉತ್ತಮಪಡಿಸುವುದು ಆಗಿದೆ. ಇಡೀ ದೇಶದ ಆಡಳಿತ, ನ್ಯಾಯದಾನ, ಉತ್ಪಾದನೆ ಎಲ್ಲದಕ್ಕೂ ಸಾಕ್ಷರತೆ, ಶಿಕ್ಷಣ ಅನಿವಾರ್ಯ. ಶಿಕ್ಷಣದಿಂದ ದೇಶದ ಜನರ ಕೌಶಲ್ಯಗಳು ಹರಿತವಾಗುತ್ತವೆ. ದೇಶದ ಉತ್ಪಾದನಾ ಸಾಮಥ್ರ್ಯ ಹೆಚ್ಚಾಗುತ್ತದೆ. ಸಾಕ್ಷರತೆಗೂ ಮುಖ್ಯವಾಗಿ ಮಹಿಳೆಯರ ಒಟ್ಟಾರೆ ಸಾಕ್ಷರತೆಗೂ ಜನಸಂಖ್ಯಾ ನಿಯಂತ್ರಣವಷ್ಟೇ ಅಲ್ಲ, ಶಿಶುಮರಣ ಸಂಖ್ಯೆ, ತಾಯಿಮರಣ ಸಂಖ್ಯೆ ಇತ್ಯಾದಿ ಆರೋಗ್ಯ ಸೂಚಿಗಳಲ್ಲಿ ಅಭೂತಪೂರ್ವ ನಿಯಂತ್ರಣ ಸಾಧಿಸಿರುವುದು ಕಂಡುಬರುತ್ತದೆ. ಇದನ್ನರಿತೇ ಸರಕಾರ ಸಾಕ್ಷರತೆ, ಶಿಕ್ಷಣದ ಮಟ್ಟವನ್ನು, ಗುಣವತ್ತತೆಯನ್ನು ಹೆಚ್ಚಿಸಲು ಏನೆಲ್ಲಾ ಪರಿಶ್ರಮವನ್ನು ಮಾಡಿದೆ, ಬಿಲಿಯನ್ನಗಟ್ಟಲೇ ರೂಪಾಯಿ ವ್ಯಯ ಮಾಡುತ್ತಿದೆ.
ಅಕ್ಷರದ ಸಾಕ್ಷರತೆಯಂತೆಯೇ ಇಂದು ವಿಜ್ಞಾನ ಸಾಕ್ಷರತೆಯೂ ತುರ್ತಾಗಿ ಬೇಕಾಗಿದೆ. ವಿಜ್ಞಾನ ತಂತ್ರಜ್ಞಾನ ಇಂದು ಬೆಳೆದಿರುವ ಸ್ವರೂಪ ನೋಡಿದರೆ ಅದರ ವಲಯದಿಂದ ದೇಶದ ಯಾವ ನಾಗರಿಕನೂ ಉಳಿಯಲು ಸಾಧ್ಯವಿಲ್ಲ. ಮಾನವನ ಬದುಕಿನ ಎಲ್ಲ ವೈಯಕ್ತಿಕ ಮತ್ತು ಸಾಮುದಾಯಿಕ ಆಯಾಮಗಳಲ್ಲಿ ವಿಜ್ಞಾನ ತಂತ್ರಜ್ಞಾನವು ಆವರಿಸಿಕೊಂಡಿದೆ. ಮಾಹಿತಿ, ಶಿಕ್ಷಣ, ಮನರಂಜನೆ, ಜಾಗೃತಿ, ಸಾರಿಗೆ, ಕೃಷಿ ಮತ್ತು ಇತರ ಕಸಬುಗಳು, ಉತ್ಪಾದನೋದ್ಯಮಗಳು, ಚುನಾವಣೆ, ಸರಕಾರ ರಚನೆ ಮತ್ತು ನಿರ್ವಹಣೆ ಎಲ್ಲ ಕ್ಷೇತ್ರದಲ್ಲಿಯೂ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ದೇಶದ ಎಷ್ಟು ಜನ ವಿಜ್ಞಾನ ಸಾಕ್ಷರತೆಯನ್ನು ಹೊಂದಿರುತ್ತಾರೋ ಅಷ್ಟು ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಸಾಧ್ಯ. ಇತರ ಕ್ಷೇತ್ರಗಳಲ್ಲಿ ಅವುಗಳ ಬಳಕೆ ಮತ್ತು ಅದರಿಂದ ಅಭಿವೃದ್ಧಿ ಸುಲಭವಾಗುತ್ತದೆ, ಪರಿಣಾಮಕಾರಿಯಾಗುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಳ್ಳುವಂಥ ಯಾವುದೇ ವಸ್ತು, ವಿದ್ಯಮಾನಗಳು ನಿಗೂಢವಾಗಿ ತೋರದೇ, ಅವು ಕೆಲವರಿಗಷ್ಟೇ ಒಲಿಯುವ ಪವಾಡಗಳೆಂಬ ಭಾವನೆಯನ್ನು ತಾಳದೇ, ಅವುಗಳ ಕುರಿತು ಕನಿಷ್ಠವಾದರೂ ಅರಿವು, ಅವುಗಳ ಮೇಲೆ ನಿಯಂತ್ರಣ ಇರುವುದೇ ಮೂಲಭೂತವಾಗಿ ವಿಜ್ಞಾನ ಸಾಕ್ಷರತೆ ಎಂದು ಭಾವಿಸಬಹುದು. ಪ್ರಾಕೃತಿಕ ಜಗತ್ತು ಮತ್ತು ಅದರಲ್ಲಾಗುತ್ತಿರುವ ಬೆಳವಣಿಗೆ ಮತ್ತು ಮಾನವ ಚಟುವಟಿಕೆಯ ಮೂಲಕ ಅದರಲ್ಲಿ ತರಲಾಗಿರುವ ಬದಲಾವಣೆಗಳ ಕುರಿತು ಪ್ರಶ್ನೆಗಳನ್ನು ಎತ್ತಲು, ಪುರಾವೆಗಳನ್ನು ಆಧರಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ತನ್ನ ವೈಜ್ಞಾನಿಕ ಅರಿವನ್ನು ಬಳಸುವ ಸಾಮಥ್ರ್ಯವನ್ನು ವಿಜ್ಞಾನ ಸಾಕ್ಷರತೆ ಎನ್ನಬಹುದು.
ಶಾಲೆಗಳಲ್ಲಿ ವೈಜ್ಞಾನಿಕ ಮನೋಭಾವದ ಬೆಳವಣಿಗೆ
ಮಗು ಯಾವಾಗ ಮಾತನ್ನು ಕಲಿಯುತ್ತದೆ ಆಗ ಅದು ನೇರ, ವಾಸ್ತವ ಅನುಭವವಲ್ಲದೇ ಭಾಷೆಯಲ್ಲಿಯೂ ಪ್ರಪಂಚದ ಅರಿವನ್ನು ಪಡೆಯತೊಡಗುತ್ತದೆ. ಈ ಹಂತದಲ್ಲಿ ಅದು ದೊಡ್ಡವರ ಮಾತನ್ನು ನಂಬತೊಡಗುತ್ತದೆ. ಏಕೆಂದರೆ ಇಂದ್ರಿಯಗಳಿಂದ ಅನುಭವಿಸಿಯೇ ನೋಡಲು ಆಗ ಅನೇಕ ಸಂಗತಿಗಳು ಲಭ್ಯವಿರುವುದಿಲ್ಲ. ಆದ್ದರಿಂದ ದೊಡ್ಡವರ ಅಧಿಕಾರವಾಣಿಯನ್ನು ನಂಬುವುದು ಅನಿವಾರ್ಯವಾಗುತ್ತದೆ. ಮನುಷ್ಯ ಭಾಷೆಯಲ್ಲಿ ಸುಳ್ಳು ಹೇಳಲು ಸಾಧ್ಯ. ದೊಡ್ಡವರ ಅವೈಚಾರಿಕ ನಂಬಿಕೆಗಳೂ ಇಲ್ಲಿ ಸೇರಿಕೊಳ್ಳುತ್ತವೆ. ಅಂತೂ ಬಹಳ ಬೇಗನೇ ಮೊದಲು ಅಪ್ಪಟ ವಿಜ್ಞಾನಿಯಂತಿದ್ದ ಮಗು ದೊಡ್ಡವರಂತೆ ಮೂಢಾಚರಣೆಯ ವ್ಯಕ್ತಿಯಾಗಿಬಿಡುತ್ತದೆ.
ಆದರೂ ಮಕ್ಕಳ ಮನೋಭಾವ, ವ್ಯಕ್ತಿತ್ವ, ವರ್ತನೆಗಳು ಇನ್ನೂ ರೂಪುಗೊಳ್ಳುವ ಗತಿಶೀಲತೆಯ ಹಂತದಲ್ಲಿ ಇರುವುದರಿಂದ ಅವರನ್ನು ಮತ್ತೊಮ್ಮೆ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸಿ, ನೆಲೆಗೊಳಿಸುವುದು ಹೆಚ್ಚು ಸುಲಭವೆಂದು ಹೇಳಬಹುದು. ಮನೆಯಲ್ಲಿಯೇ ಪೋಷಕರು ಸ್ವತಃ ವೈಜ್ಞಾನಿಕ ಮನೋವೃತ್ತಿವುಳ್ಳವರಾಗಿದ್ದರೆ ಮಕ್ಕಳೂ ಸಹಜವಾಗಿಯೇ ಅವರ ಸ್ವಭಾವವನ್ನೇ ಬೆಳೆಸಿಕೊಂಡಿರುತ್ತಾರೆ. ಆಗಲೂ ಶಾಲಾ ಪರಿಸರದಲ್ಲಿ ಅವರು ಇತರರ ಮೂಢಾಚರಣೆಗಳನ್ನು ಎದುರಿಸಿ, ಅದರಿಂದ ಬಚಾವಾಗಬೇಕಾಗುತ್ತದೆ. ಮನೆಯಲ್ಲಿ ಪೋಷಕರು ಅತಾರ್ಕಿಕ ಆಚರಣೆಗಳಿಗೆ ಪಕ್ಕಾಗಿದ್ದರೆ ಬಹುಶಃ ಮಕ್ಕಳ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿ ಶಾಲೆಗಳ ಮೇಲೆ ಬೀಳುತ್ತದೆ.
ಶಾಲೆಗಳಲ್ಲಿಯೂ ವಾತಾವರಣ ಸಾಂಪ್ರದಾಯಿಕವಾಗಿರುವ ಸಂದರ್ಭಗಳೇ ಹೆಚ್ಚು. ಮೊದಲು ಶಾಲೆಗಳನ್ನು ಮತಾಚರಣೆ ಮುಕ್ತವಾದ ಸಾರ್ವತ್ರಿಕ ತಾಣಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಸರಕಾರಿ ಶಾಲೆ ಕಾಲೇಜುಗಳಷ್ಟೇ ಅಲ್ಲ, ಖಾಸಗೀ ಶಾಲೆಗಳೂ ಜಾತ್ಯಾತೀತ ಅಸಂಪ್ರದಾಯಿಕ ಸಂಸ್ಥೆಗಳಾಗಿರಬೇಕು. ಏಕೆಂದರೆ ಯಾವುದೇ ಶಾಲೆಯಾಗಿರಲಿ ಅಲ್ಲಿ ಹುಟ್ಟಿನಿಂದ ವಿವಿಧ ಧರ್ಮ, ಮತ, ಜಾತಿ, ನಂಬಿಕೆಗಳ ಹಿನ್ನಲೆಯಿಂದ ಬಂದಿರುವ ಮಕ್ಕಳು ಇರುತ್ತಾರೆ. ಇಲ್ಲಿ ಯಾವುದೇ ಒಂದು ಮತಕ್ಕೆ ಸಂಬಂಧಿಸಿದ ಆಚರಣೆಗಳನ್ನು ಇರಿಸಿಕೊಂಡರೆ ಉಳಿದವರ ಭಾವನೆಗಳಿಗೆ ಅದು ಧಕ್ಕೆಯುಂಟು ಮಾಡುತ್ತದೆ. ಮುಕ್ತವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕಾಗಿರುವುದರಿಂದ ಉದ್ದೇಶಕ್ಕೆ ಮತಾಚರಣೆಗಳು ಅಡ್ಡಿಯುಂಟು ಮಾಡುತ್ತವೆ.
ಶಾಲೆಯ ಇಡೀ ವಾತಾವರಣವನ್ನೇ ಜಾತ್ಯಾತೀತವಾದ ವೈಜ್ಞಾನಿಕ ವಿಧಾನ, ಮನೋಭಾವದಿಂದ ಉತ್ತೇಜಿತವಾದ ರೀತಿಯಲ್ಲಿ ನಿರ್ಮಾಣ ಮಾಡುವುದರ ಜೊತೆಯಲ್ಲಿ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷವಾದ ಪ್ರಯತ್ನಗಳೂ ನಡೆಯಬೇಕಾಗುತ್ತವೆ. ಶಾಲೆಗಳಲ್ಲಿ ಮತ್ತು ಶಿಕ್ಷಣ ಇಲಾಖೆಯಲ್ಲಿ ಹಲವು ಮಟ್ಟಗಳಲ್ಲಿ ವಿಜ್ಞಾನ ಭಾಷಣ, ಸ್ಪರ್ಧೆಗಳು, ಮಕ್ಕಳೇ ಮಾಡಿದ ವಿಜ್ಞಾನ ಆಟಿಕೆಗಳು, ಪ್ರಯೋಗಗಳು, ಕಾರ್ಯಯೋಜನೆಯ ಪ್ರದರ್ಶನ, ವಿಜ್ಞಾನ ವಿಡಿಯೋ, ನಾಟಕಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇವೆಲ್ಲವೂ ವೈಜ್ಞಾನಿಕ ಮಾಹಿತಿ ಮತ್ತು ಕೌಶಲ್ಯವನ್ನು ಬೆಳೆಸುತ್ತವೆಯೇ ವಿನಃ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದರಲ್ಲಿ ಹೆಚ್ಚಿನ ಮಟ್ಟಿಗೆ ಸಹಾಯಕವಾಗುವುದಿಲ್ಲ. ಅದಕ್ಕಾಗಿಯೇ ವಿಶೇಷ ಪ್ರಯತ್ನಗಳು ನಡೆಯಬೇಕು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕು. ದೈನಂದಿನ ಬದುಕಿನಲ್ಲಿಯೂ ಅವರು ವಿಜ್ಞಾನ ವಿಧಾನವನ್ನು ಅನಾಯಾಸ ಅಳವಡಿಸಿಕೊಳ್ಳುವಂತೆ ಮಾಡಬೇಕು. ಅದರ ಪ್ರಯೋಜನವನ್ನು ಅವರು ತಮ್ಮ ಶೈಕ್ಷಣಿಕ ಸಾಧನೆಯಲ್ಲೂ ಬಳಸಿಕೊಳ್ಳಬೇಕು. ಇದೆಲ್ಲವುಗಳ ಮೂಲಕ ಅವರಲ್ಲಿ ವೈಜ್ಞಾನಿಕ ಮನೋವೃತ್ತಿ ಬೆಳೆಯುವುದಕ್ಕೆ ಪ್ರೇರಕವಾಗಬೇಕು. ಮೊದಲನೆಯದಾಗಿ ಈ ಪ್ರಯತ್ನ ಆದಷ್ಟು ಪಠ್ಯಕ್ರಮದಿಂದ ಹೊರಗೆ ಅನೌಪಚಾರಿಕ ಪರಿಸರದಲ್ಲಿ ನಡೆಯಬೇಕು. ಶಿಕ್ಷಕರು ಶಾಲೆಯ ವಾತಾವರಣದಲ್ಲಿ ನಡೆಸಿದರೂ ಮಕ್ಕಳೊಂದಿಗೆ ಸ್ನೇಹಿತರಾಗಿರಬೇಕು. ಇದು ಬೋಧನೆಯ ಇನ್ನೊಂದು ಹೊರೆಯಾಗಿರದೇ ಮಕ್ಕಳೆ ತಾವು ಮಾಡುವುದರಲ್ಲಿ ತೊಡಗಿ ತಪ್ಪು ಸರಿಗಳನ್ನು ಮಾಡುತ್ತಾ, ಅನುಭವಿಸುತ್ತಾ ಕಲಿಕೆಯನ್ನು ವೃದ್ಧಿಗೊಳಿಸುವ ಅವಕಾಶವನ್ನು ಕಲ್ಪಿಸಬೇಕು. ಶಿಕ್ಷಕರು ಕೇವಲ ಸಂಚಾಲಕರಾಗಿರಬೇಕು.
ಎರಡನೇಯದಾಗಿ ಮಕ್ಕಳನ್ನು ಯಾವುದಾದರೂ ಒಂದು ಸಮಸ್ಯೆಗೆ ಪರಿಹಾರ ಹುಡುಕುವ ಕ್ರಿಯೆಯಲ್ಲಿ ತೊಡಗಿಸಬೇಕು. ಸಮಸ್ಯೆ ತುಂಬ ಸರಳವಾಗಿರಬೇಕು. ಅವರ ಪರಿಸರದಲ್ಲಿಯೇ ಇರಬೇಕು. ಅವರಿಗೆ ನೇರವಾಗಿ ಸಂಬಂಧಿಸಿದ್ದಾಗಿರಬೇಕು. ಮತ್ತು ಅದರ ಪರಿಹಾರವೂ ಸರಳವಾಗಿರಬೇಕು.
Subscribe to:
Post Comments (Atom)
-
ಶತಮಾನದ ಕೊನೆಯ ಶುಕ್ರ ಸಂಕ್ರಮ. ಲೇಖನ - ಡಾ . ಲಿಂಗರಾಜ ರಾಮಾಪೂರ ಶತಮಾನದ ಅಪರೂಪದ ಶುಕ್ರಸಂಕ್ರಮ ಜೂನ್ 6 ರಂದು ಸಂಭವಿಸಲಿದೆ . ಈ ಹಿಂದೆ 2004 ...
No comments:
Post a Comment